ಮಂಗಳೂರು ಕ್ಷೇತ್ರದಿಂದ(ಉಳ್ಳಾಲ) ಸತತ ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್‌ ಫರೀದ್‌ ಸೋಲಿಲ್ಲದ ಸರದಾರ. ಕರ್ನಾಟಕ ವಿಧಾನಸಭೆಯ 17ನೇ ಸ್ಪೀಕರ್ ಆಗಿದ್ದ ಹಿರಿಯ ಕಾಂಗ್ರೆಸಿಗ ಯು.ಟಿ. ಖಾದರ್‌ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಂಗಳೂರು: ಮಂಗಳೂರು ಕ್ಷೇತ್ರದಿಂದ(ಉಳ್ಳಾಲ) ಸತತ ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್‌ ಫರೀದ್‌ ಸೋಲಿಲ್ಲದ ಸರದಾರ. ಕರ್ನಾಟಕ ವಿಧಾನಸಭೆಯ 17ನೇ ಸ್ಪೀಕರ್ ಆಗಿದ್ದ ಹಿರಿಯ ಕಾಂಗ್ರೆಸಿಗ ಯು.ಟಿ. ಖಾದರ್‌ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇರಳ ಗಡಿಭಾಗ ಕಾಸರಗೋಡಿನ ಉಪ್ಪಳದಲ್ಲಿ 1969ರಲ್ಲಿ ಜನಿಸಿದ ಯು.ಟಿ.ಖಾದರ್‌ ಬಾಲ್ಯದಿಂದಲೇ ರಾಜಕಾರಣದ ನೆರಳಿನಲ್ಲಿ ಬೆಳೆದವರು. ತಂದೆ ಹಾಜಿ ಯು.ಟಿ.ಫರೀದ್‌ ಅವರು ಆಗಿನ ಉಳ್ಳಾಲ ಕ್ಷೇತ್ರದಿಂದ ನಿರಂತರ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿದ್ದರು. ತಾಯಿ ನಸೀಮಾ. ಮೂವರು ಸಹೋದರರು, ಓರ್ವ ಸಹೋದರಿ. ಸಹೋದರರ ಪೈಕಿ ಡಾ. ಯು.ಟಿ.ಇಫ್ತಿಕಾರ್‌ ಫರೀದ್ ಅವರು ರಾಜ್ಯ ಅಲೈಡ್‌ ಅಂಡ್‌ ಹೆಲ್ತ್‌ ಕೇರ್‌ ಕೌನ್ಸಿಲ್‌ ಕರ್ನಾಟಕ ಇದರ ಚೇರ್‌ಮೆನ್‌ ಆಗಿದ್ದಾರೆ.

ಯು.ಟಿ.ಖಾದರ್‌ ಅವರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪದವಿ, ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ್ದಾರೆ.

ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದಲ್ಲಿ ತೊಡಗಿಸಿಕೊಂಡ ಯು.ಟಿ.ಖಾದರ್‌ ಅವರು 1990ರಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎಸ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿ ಸಕ್ರಿಯರಾಗಿದ್ದರು. ಯೂತ್ ಕಾಂಗ್ರೆಸ್ ಮತ್ತು ಸೇವಾದಳದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 2007ರಲ್ಲಿ ತಂದೆಯ ನಿಧನದ ನಂತರ ಉಳ್ಳಾಲ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿ ಗೆದ್ದು ಶಾಸಕರಾದರು.2008, 2013, 2018, 2023ರಲ್ಲಿ ಮಂಗಳೂರು (ಹಿಂದಿನ ಉಳ್ಳಾಲ) ಕ್ಷೇತ್ರದಿಂದ ನಿರಂತರ ಗೆಲುವು ಪಡೆದರು. ಸತತ ಐದು ಬಾರಿ ಶಾಸಕರು. 2018ರಲ್ಲಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದರು.ಸಚಿವ ಸ್ಥಾನ:

2013–2016 ರವರೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಯು.ಟಿ. ಖಾದರ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2016–2018 ರ ವರೆಗೆ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು. ಸಂಪುಟ ವಿಸ್ತರಣೆ ವೇಳೆ 2018–2019ರಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರೂ ಆಗಿದ್ದರು. ಈ ವೇಳೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಇತರ ಹುದ್ದೆಗಳು: ಕೆಪಿಸಿಸಿ ವಕ್ತಾರ (2020), ವಿರೋಧ ಪಕ್ಷದ ಉಪನಾಯಕ (2022) ಆಗಿದ್ದರು. ಪ್ರಮುಖ ಸಾಧನೆಗಳು: ಯು.ಟಿ.ಖಾದರ್‌ ಅವರು ಆರೋಗ್ಯ ಸಚಿವರಾಗಿದ್ದಾಗ ಈ ಕ್ಷೇತ್ರದಲ್ಲಿ ಗುಟ್ಕಾ ನಿಷೇಧ, ಬೈಕ್ ಆಂಬುಲೆನ್ಸ್‌ಗೆ ಚಾಲನೆ, 108 ಆರೋಗ್ಯ ತುರ್ತು ಸಂಖ್ಯೆ, ಆರೋಗ್ಯ ಶ್ರೀ, ದಂತ ಭಾಗ್ಯ ಯೋಜನೆಗಳು, ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯೂನಿಟ್‌ಗಳ ಅಳವಡಿಕೆ, ಹಿಮೋಫೀಲಿಯಾ ಸೇರಿದಂತೆ ಇತರೆ ಅಪರೂಪದ ಕಾಯಿಲೆಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯ ಇವರ ಪ್ರಮುಖ ಸಾಧನೆ.ಆಹಾರ ಸಚಿವರಾಗಿದ್ದಾಗ ರೇಷನ್ ಕಾರ್ಡ್‌ಗೆ ಅಗತ್ಯ ದಾಖಲೆಗಳನ್ನು ಸರಳಗೊಳಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದ್ದರು.ಸ್ಪೀಕರ್ ನಿರ್ವಹಣೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ 2023ರಲ್ಲಿ ಸ್ಪೀಕರ್‌ ಆಗಿ ಯು.ಟಿ.ಖಾದರ್ ಅವಿರೋಧ ಆಯ್ಕೆಯಾಗಿದ್ದರು. ಸದನದಲ್ಲಿ ನಿಷ್ಪಕ್ಷಪಾತ ಮತ್ತು ಶಿಸ್ತು ಕಾಯ್ದುಕೊಳ್ಳುವಲ್ಲಿ ಗಮನ ಸೆಳೆದ ಖಾದರ್‌, ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿಪಕ್ಷ ಸದಸ್ಯರನ್ನು ಕೆಲವು ತಿಂಗಳ ಮಟ್ಟಿಗೆ ಅಮಾನತುಗೊಳಿಸಿ ಪರ-ವಿರೋಧ ಚರ್ಚೆಗೂ ಕಾರಣರಾಗಿದ್ದರು.

ಮುಸ್ಲಿಂ ಸಮುದಾಯದಿಂದ ಬಂದ ಯು.ಟಿ.ಖಾದರ್‌ ಅವರು ಎಲ್ಲ ಜಾತಿ-ಧರ್ಮಗಳ ನಡುವೆ ಸಾಮರಸ್ಯದ ರಾಯಭಾರಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಇವರ ಸ್ಪೀಕರ್‌ ಸ್ಥಾನದ ಅವಧಿಯಲ್ಲಿ ಎಲ್ಲ ಶಾಸಕರಿಗೆ ಸರ್ಕಾರದ ಗಂಡಭೇರುಂಡ ಲಾಂಛನವನ್ನು ಒದಗಿಸಿದ್ದರು. ವಿಧಾನಸೌಧ ದ್ವಾರಗಳನ್ನು ನವೀಕರಣಗೊಳಿಸಿದ್ದರು. ಫೇಸ್‌ ಐಡೆಂಟಿಫಿಕೇಶನ್‌ ಕ್ಯಾಮರಾ ಅಳವಡಿಕೆ, ಸುವರ್ಣ ವಿಧಾನಸೌಧದಲ್ಲಿ ಬಸವ ಮಂಟಪ ಅನಾವರಣ, ಅಲಂಕಾರಿಕ ದೀಪಗಳ ಅಳವಡಿಸಿ ಪ್ರವಾಸಿಗರ ಆಕರ್ಷಣೆ, ಪುಸ್ತಕ ಮೇಳ ಆಯೋಜನೆ.

ಯು.ಟಿ.ಖಾದರ್‌ ಅವರಿಗೆ ‘ಸದನ ವೀರ’ ಪ್ರಶಸ್ತಿ (2008-13). ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2025) ಪದವಿ ಲಭಿಸಿದೆ. ಘಾನಾ ಹಾಗೂ ಸಿಡ್ನಿಯಲ್ಲಿ ಕಾಮನ್‌ವೆಲ್ತ್‌ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಭಾಗಿ, ಇದಲ್ಲದೆ ಸ್ಪೀಕರ್‌ ನೆಲೆಯಲ್ಲಿ ಥೈಲ್ಯಾಂಡ್, ಆಫ್ರಿಕಾ, ಸೌದಿ ಅರೇಬಿಯಾ, ದುಬೈ ವಿದೇಶ ಪ್ರಯಾಣ, ಸ್ವಿಟ್ಜರ್ಲೆಂಡ್, ಇಟಲಿ, ಫ್ರಾನ್ಸ್, ಯುಕೆ, ಯುಎಸ್ಎ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಮಲೇಷ್ಯಾಗಳ ಪ್ರವಾಸ ಮಾಡಿದ್ದಾರೆ.

ಶಾಂತ ಸ್ವಭಾವ, ಜನಸಂಪರ್ಕ ಮತ್ತು ನಿಷ್ಪಕ್ಷಪಾತ ನಡವಳಿಕೆಗೆ ಹೆಸರಾದ ನಾಯಕ. ದಕ್ಷಿಣ ಕನ್ನಡದಲ್ಲಿ ಕೋಮು ಸಂಘರ್ಷಗಳ ಸಂದರ್ಭದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಯತ್ನ ಮಾಡಿದ್ದಾರೆ. ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಯು.ಟಿ. ಖಾದರ್‌ ಪತ್ನಿ ಹಾಗೂ ಪುತ್ರಿಯೊಂದಿಗೆ ವಾಸವಿದ್ದಾರೆ.