ಮಂಗಳೂರು ನಗರದ ತಣ್ಣೀರುಬಾವಿ-ಕಸಬಾ ಬೆಂಗ್ರೆ ಪ್ರದೇಶಕ್ಕೆ ಮಂಗಳೂರು ನಗರದಿಂದ ಸರ್ಕಾರಿ ಬಸ್ಸು ಓಡಿಸಲು ಆಗ್ರಹಿಸಿ ಡಿವೈಎಫ್‌ಐ ಹಾಗೂ ಸಿಪಿಐಎಂ ಬೆಂಗ್ರೆ ವತಿಯಿಂದ ಸೋಮವಾರ ಮುಖ್ಯ ರಸ್ತೆಯ ಕಸಬಾ ಬೆಂಗ್ರೆಯಲ್ಲಿ ಸಲೀಂ ಅಂಗಡಿ ಬಳಿ ಪ್ರತಿಭಟನೆ ನಡೆಯಿತು.
ಮಂಗಳೂರು: ಮಂಗಳೂರು ನಗರದ ತಣ್ಣೀರುಬಾವಿ-ಕಸಬಾ ಬೆಂಗ್ರೆ ಪ್ರದೇಶಕ್ಕೆ ಮಂಗಳೂರು ನಗರದಿಂದ ಸರ್ಕಾರಿ ಬಸ್ಸು ಓಡಿಸಲು ಆಗ್ರಹಿಸಿ ಡಿವೈಎಫ್‌ಐ ಹಾಗೂ ಸಿಪಿಐಎಂ ಬೆಂಗ್ರೆ ವತಿಯಿಂದ ಸೋಮವಾರ ಮುಖ್ಯ ರಸ್ತೆಯ ಕಸಬಾ ಬೆಂಗ್ರೆಯಲ್ಲಿ ಸಲೀಂ ಅಂಗಡಿ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ತಣ್ಣೀರುಬಾವಿ-ಕಸಬಾ ಬೆಂಗ್ರೆ ಭಾಗದ ಜನರ ದೈನಂದಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಬಸ್ ಸೇವೆ ಅತ್ಯಂತ ಅವಶ್ಯಕವಾಗಿದೆ ಎಂದರು.ಡಿವೈಎಫ್ಐ ಮಂಗಳೂರು ನಗರ ಕಾರ್ಯದರ್ಶಿ ತೈಯೂಬ್ ಬೆಂಗ್ರೆ ಮಾತನಾಡಿ, ತಣ್ಣೀರುಬಾವಿ-ಕಸಬಾ ಬೆಂಗ್ರೆ ಭಾಗದ ಜನರಿಗೆ ಸರ್ಕಾರಿ ಬಸ್ ಸೇವೆಯ ತೀವ್ರ ಅಗತ್ಯವಿದೆ. ಈ ಭಾಗದಿಂದ ಮಂಗಳೂರಿನ ವಿವಿಧ ಶಾಲಾ-ಕಾಲೇಜುಗಳು, ಉದ್ಯೋಗ ಸ್ಥಳಗಳು, ಆಸ್ಪತ್ರೆಗಳು, ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ನಗರದ ಹಲವು ಭಾಗಗಳಿಗೆ ಪ್ರತಿನಿತ್ಯ ಜನರು ಸಂಚರಿಸುತ್ತಿದ್ದಾರೆ. ಆದ್ದರಿಂದ ಜನರ ಅಗತ್ಯಕ್ಕೆ ಅನುಗುಣವಾಗಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬೆಂಗ್ರೆ ಪ್ರದೇಶಕ್ಕೆ ಮೀಸಲಿಟ್ಟು ಮುಕ್ತ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ದಲಿತ ಹಕ್ಕುಗಳ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೃಷ್ಣ ತಣ್ಣೀರುಬಾವಿ, ಡಿವೈಎಫ್ಐ ಮುಖಂಡರಾದ ಹನೀಫ್ ಬೆಂಗ್ರೆ, ನೌಶಾದ್ ಬೆಂಗ್ರೆ, ರಿಜ್ವಾನ್ ಬೆಂಗ್ರೆ, ಮುಹಾಝ್ ಬೆಂಗ್ರೆ, ಕಬೀರ್ ಬೆಂಗ್ರೆ, ನಾಝಿಮ್, ಜಂಶೀರ್, ನಿಸಾರ್, ಕಬೀರ್, ಶಾಫಿಲ್, ಇಸ್ಮಾಯಿಲ್, ಸಯ್ಯದ್ ಆಲಿ, ಸಿಪಿಐಎಂ ಮುಖಂಡರಾದ ಪಿ.ಜಿ.ರಫೀಕ್, ನೌಶಾದ್ ಬೆಂಗ್ರೆ, ತಂಝೀಲ್ ಬೆಂಗ್ರೆ, ಸುನೀತಾ ತಣ್ಣೀರುಬಾವಿ, ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಮುಖಂಡರಾದ ಸರ್ಫರಾಝ್, ಮುದಸ್ಸೀರ್, ಋಣ ಮುಕ್ತ ಹೋರಾಟ ಸಮಿತಿ ಮುಖಂಡರಾದ ಝೊಹರಾ ಸುಹಾನಾ, ಶರೀಫ್ ಮತ್ತಿತರರು ಇದ್ದರು.ಕೆಎಸ್ಸಾರ್ಟಿಸಿ ಮಂಗಳೂರು ಡಿಪೋ ಸುಪರಿಡೆಂಟ್ ಮ್ಯಾನೇಜರ್ ಮಂಜುನಾಥ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.