ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಮೂರನೇ ತ್ರೈಮಾಸಿಕ ಅವಧಿಯಲ್ಲಿ ತೈಲಾಗಾರದ ಆಪರೇಷನ್ಸ್‌ನಿಂದ 29,720 ಕೋಟಿ ರು. ಆದಾಯ ದಾಖಲಿಸಿದೆ.
ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಮೂರನೇ ತ್ರೈಮಾಸಿಕ ಅವಧಿಯಲ್ಲಿ ತೈಲಾಗಾರದ ಆಪರೇಷನ್ಸ್‌ನಿಂದ 29,720 ಕೋಟಿ ರು. ಆದಾಯ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 25,601 ಕೋಟಿ ರು. ಆದಾಯ ಗಳಿಸಿತ್ತು.
ಇದರಲ್ಲಿ ತೆರಿಗೆ ಮುಂಚಿನ ಆದಾಯ 2,214 ಕೋಟಿ ರು. ಆಗಿದ್ದು, ಕಳೆದ ಅವಧಿಯಲ್ಲಿ ಇದು 469 ಕೋಟಿ ರು. ಆಗಿತ್ತು. ತೆರಿಗೆಯೇತರದಲ್ಲಿ 1,445 ಕೋಟಿ ರು. ಆದಾಯ ಬಂದಿದ್ದು, ಕಳೆದ ಬಾರಿ 304 ಕೋಟಿ ರು. ಆಗಿತ್ತು. ಕಂಪನಿಯ ಡೆಬಿಟ್ ಈಕ್ವಿಟಿ ರೇಶ್ಯೋದಲ್ಲಿ ಸುಧಾರಣೆ ಕಂಡಿದ್ದು, ಕಳೆದ ಬಾರಿ 0.63 ಇದ್ದರೆ, ಈ ಬಾರಿ 0.79 ದಾಖಲಿಸಿದೆ.
ಕಳೆದ ಒಂಭತ್ತು ತಿಂಗಳಲ್ಲಿ ಆಪರೇಷನ್ಸ್‌ನಿಂದ 76,661 ಕೋಟಿ ರು. ಆದಾಯ ದಾಖಲಿಸಿದ್ದು, ಹಿಂದಿನ ಇದೇ ಅವಧಿಯಲ್ಲಿ ಇದು 81,676 ಕೋಟಿ ರು. ಆಗಿತ್ತು. ತೆರಿಗೆ ಪೂರ್ವದಲ್ಲಿ 2,786 ಕೋಟಿ ರು.(ಕಳೆದ ಬಾರಿ 471 ಕೋಟಿ ರು.), ತೆರಿಗೇತರದಲ್ಲಿ 1,812 ಕೋಟಿ ರು.(ಕಳೆದ ಬಾರಿ 313 ಕೋಟಿ ರು.) ಆದಾಯ ದಾಖಲಿಸಿದೆ. ಈ ಅವಧಿಯಲ್ಲಿ ಸಾಲ ಪಡೆಯುವಿಕೆಯಲ್ಲಿ ಈ ಬಾರಿ 12,867 ಕೋಟಿ ರು.ನಿಂದ 9,290 ಕೋಟಿ ರು.ಗೆ ಇಳಿಕೆಯಾಗಿದೆ. ಡೆಬಿಟ್ ಈಕ್ವಿಟಿ ರೇಶ್ಯೋ ಕೂಡ 0.63 ರಿಂದ 0.99ರ ವರೆಗೆ ಸುಧಾರಣೆಯಾಗಿದೆ.ಕಚ್ಚಾ ತೈಲ ಸಂಗ್ರಹಣೆ ತ್ರೈಮಾಸಿಕದಲ್ಲಿ 4.70 ಮಿಲಿಯನ್ ಮೆಟ್ರಿಕ್ ಟನ್ ಆಗಿದ್ದು, ಒಂಭತ್ತು ತಿಂಗಳಲ್ಲಿ ಒಟ್ಟು 13.54 ಮಿ.ಮೆ.ಟನ್ ಆಗಿದೆ. ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾ ತೈಲ ಆಮದಾಗಿದ್ದು, ಡಿಸೆಂಬರ್ 25 ರಂದು ಐಎಸ್‌ಪಿಆರ್‌ನ ಭೂಗತ ತೈಲಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸಲಾಗಿದೆ ಎಂದು ಎಂಆರ್‌ಪಿಎಲ್ ಪ್ರಕಟಣೆ ತಿಳಿಸಿದೆ.