ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಆಕಾಶವಾಣಿಯಲ್ಲಿ ಭಾನುವಾರ ಮಾಡಿದ ‘ಮನ್‌ಕೀ ಬಾತ್’ ಭಾಷಣದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಧುನಿಕ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಸ್ತಾಪಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಪ್ರತಿ ತಿಂಗಳು ನಡೆಯುವ ಮನ್‌ಕೀ ಬಾತ್‌ನಲ್ಲಿ ಈ ಬಾರಿ ಮಂಗಳೂರಿನ ವಿಷಯವನ್ನು ವಿಶೇಷವಾಗಿ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ಮಂಗಳೂರಿನಲ್ಲಿ ಅತ್ಯಾಧುನಿಕ ರೀತಿಯ ನಡೆಯುವ ತ್ಯಾಜ್ಯ ನಿರ್ವಹಣೆಯನ್ನು ಮಾದರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಪ್ರಸ್ತುತ ಮಂಗಳೂರು ಸೇರಿದಂತೆ ಇಡೀ ದ.ಕ. ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಾಧುನಿಕ ರೀತಿಯಲ್ಲಿ ನಡೆಯುತ್ತಿದೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ಕೀ ಬಾತ್‌ನಲ್ಲಿ ಪ್ರಸ್ತಾಪಿಸಿ ರಾಷ್ಟ್ರದ ಗಮನ ಸೆಳೆದಿದ್ದಾರೆ.ಮಂಗಳೂರಿನ ತ್ಯಾಜ್ಯ ನಿರ್ವಹಣೆ ವಿಶೇಷತೆ ಏನು?:
ಪ್ರಸ್ತುತ ದ.ಕ. ಜಿಲ್ಲಾ ಪಂಚಾಯ್ತಿ, ಮಂಗಳಾ ರಿಸೋರ್ಸ್ ಮೆನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್(ಎಂಆರ್‌ಎಂಪಿಎಲ್), ವೈಷ್ಣವಿ ಕಂಪನಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಒಡ್ಡೂರು ಫಾರ್ಮ್ಸ್ ಸಂಸ್ಥೆಗಳಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಇವುಗಳನ್ನೆಲ್ಲ ಒಟ್ಟಾಗಿ ಸೇರಿಸಿ ಪ್ರಧಾನಿ ಮನ್‌ಕೀ ಬಾತ್‌ನಲ್ಲಿ ಮಂಗಳೂರು ತ್ಯಾಜ್ಯ ನಿರ್ವಹಣೆ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನುವುದು ಎಂಆರ್‌ಎಂಪಿಎಲ್ ಅಧ್ಯಕ್ಷ ದಿಲ್‌ರಾಜ್ ಆಳ್ವ ಅಭಿಪ್ರಾಯ.ಜಿಲ್ಲಾ ಪಂಚಾಯ್ತಿ ವತಿಯಿಂದ ನಾಲ್ಕು ಎಂಆರ್‌ಎಫ್(ಮೆಟೀರಿಯಲ್ ರಿಕವರಿ ಫೆಸಿಲಿಟಿ)ಅಡಿಯಲ್ಲಿ ಎಂಆರ್‌ಎಂಪಿಎಲ್ ವತಿಯಿಂದ ಎಡಪದವು, ಕೆದಂಬಾಡಿ, ಬಂಟ್ವಾಳ ಹಾಗೂ ಉಡುಪಿ ಜಿಲ್ಲೆಯ ನಿಟ್ಟೆ, ವೈಷ್ಣವಿ ಕಂಪನಿಯಿಂದ ಉಜಿರೆ ತ್ಯಾಜ್ಯ ಘಟಕದ ನಿರ್ವಹಣೆ ನಡೆಯುತ್ತಿದೆ. ಇದಲ್ಲದೆ ಜಿ.ಪಂ. ಅಡಿಯಲ್ಲಿ ಎಲ್ಲ 250 ಹಳ್ಳಿಗಳಲ್ಲಿ ಕೂಡ ತ್ಯಾಜ್ಯ ವಿಲೇವಾರಿ ನಡೆಯುತ್ತದೆ. ಒಡ್ಡೂರು ಫಾರ್ಮ್‌ನಲ್ಲಿ ಹಸಿ ತ್ಯಾಜ್ಯ ಬಳಸಿ ಸಿಎಮನ್‌ಜಿ ಬಯೋ ಗ್ಯಾಸ್ ಉತ್ಪಾದಿಸಲಾಗುತ್ತಿದೆ. ಎಂಆರ್‌ಎಂಪಿಎಲ್‌ನಿಂದ ಹಸಿ ತ್ಯಾಜ್ಯ ಹೊರತು ಪಡಿಸಿ ಬೇರೆ ಎಲ್ಲ ಒಣ ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ಯೋಜನೆ ಕಾರ್ಯಗತಗೊಂಡಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಪ್ಲಾಸ್ಟಿಕ್ ಉತ್ಪನ್ನವನ್ನು ಬಳಸಿಕೊಂಡು ತಲಪಾಡಿಯಿಂದ ನಂತೂರು ಹಾಗೂ ಮುಕ್ಕದಿಂದ ಸಾಸ್ತಾನ ವರೆಗೆ ಹೆದ್ದಾರಿಯ ಸರ್ವಿಸ್ ರಸ್ತೆಗಳಿಗೆ ಡಾಂಬರೀಕರಣ ನಡೆಸಲಾಗಿದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡೇ ಪ್ರಧಾನಿ ಮನ್‌ಕೀ ಬಾತ್‌ನಲ್ಲಿ ಮಂಗಳೂರಿನಲ್ಲಿ ಅತ್ಯಾಧುನಿಕ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ ಎಂದು ನಂಬಲಾಗಿದೆ.