ಡಿ.20ರಂದು ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿ.21ರಂದು ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌ನಲ್ಲಿ ಕೇಕ್‌ ಮತ್ತು ವೈನ್‌ ಫೆಸ್ಟ್‌ ನಡೆಯಲಿದ್ದು, ಸಾವಿರಕ್ಕೂ ಅಧಿಕ ಜನರ ನಿರೀಕ್ಷೆಯಿದೆ.

ಮಂಗಳೂರು: ಡಿ.20ರಿಂದ ಆರಂಭವಾಗಲಿರುವ ವೈಭವದ ಕರಾವಳಿ ಉತ್ಸವದ ಎಲ್ಲ ಕಾರ್ಯಕ್ರಮಗಳ ವೇಳಾಪಟ್ಟಿ ನಿಗದಿಯಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಮನರಂಜನೆಯ ಜತೆಗೆ ವೈವಿಧ್ಯಮಯ ಅನುಭವಗಳನ್ನು ನೀಡಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿ ಉತ್ಸವದ ಸಂಪೂರ್ಣ ಮಾಹಿತಿ ನೀಡಿದರು.ಕಾರ್ಯಕ್ರಮಗಳ ವೇಳಾಪಟ್ಟಿ:

ಡಿ.20ರಂದು ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿ.21ರಂದು ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌ನಲ್ಲಿ ಕೇಕ್‌ ಮತ್ತು ವೈನ್‌ ಫೆಸ್ಟ್‌ ನಡೆಯಲಿದ್ದು, ಸಾವಿರಕ್ಕೂ ಅಧಿಕ ಜನರ ನಿರೀಕ್ಷೆಯಿದೆ, ಡಿ.23ರಿಂದ ಜ.2ರವರೆಗೆ ಸುಲ್ತಾನ್‌ ಬತ್ತೇರಿ ಅಥವಾ ಪಣಂಬೂರಿನಲ್ಲಿ ಹೆಲಿಕಾಪ್ಟರ್‌ ಸಂಚಾರ ಏರ್ಪಡಿಸಲಾಗಿದ್ದು, ಹೆಲಿಕಾಪ್ಟರ್‌ನಲ್ಲಿ ಕುಳಿತು ಕರಾವಳಿಯ ಸೌಂದರ್ಯವನ್ನು ಆಸ್ವಾದಿಸಬಹುದು. ಡಿ.27ರಂದು ಉಳ್ಳಾಲ ಬೀಚ್‌ನಲ್ಲಿ ಝುಂಬಾ ಕಾರ್ಯಕ್ರಮ, ಡಿ.27, 28ರಂದು ಉಳ್ಳಾಲ ಬೀಚ್‌ನಲ್ಲಿ ಬೀಚ್‌ ಫುಟ್ಬಾಲ್‌, ಬೀಚ್‌ ವಾಲಿಬಾಲ್‌, ಟಗ್‌ ಆಫ್‌ ವಾರ್‌, ಫುಡ್‌ ಫೆಸ್ಟಿವಲ್‌, ಜ.3-4ರಂದು ಸಂಜೆ 6ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮ್ಯೂಸಿಕ್‌ ಫೆಸ್ಟಿವಲ್‌ ನಡೆಯಲಿದ್ದು, ಜ.3ರಂದು ಕೈಲಾಶ್‌ ಖೇರ್‌ ನೈಟ್‌, ಜ.4ರಂದು ವಿಜಯಪ್ರಕಾಶ್‌ ನೈಟ್‌ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಜ.9ರಿಂದ 11ರವರೆಗೆ ಕದ್ರಿ ಪಾರ್ಕ್‌ ರಸ್ತೆಯಲ್ಲಿ ಪೈಂಟಿಂಗ್‌ ಹಾಗೂ ಕಲಾಪರ್ಬ ನಡೆಯಲಿದೆ. ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ಸ್ಟಾರ್ಟ್‌ ಅಪ್‌ ಕಾನ್‌ಕ್ಲೇವ್‌, ಟ್ಯಾಲೆಂಟ್‌ ಶೋ, ಮನರಂಜನಾ ಕಾರ್ಯಕ್ರಮಗಳು, ಟ್ರಯಾತ್ಲಾನ್‌ ಮತ್ತು ಇತರ ಕ್ರೀಡಾಕೂಟಗಳು ನಡೆಯಲಿವೆ. ಜ.10,11ರಂದು ಸಸಿಹಿತ್ಲು ಬೀಚ್‌ನಲ್ಲಿ ಸ್ಟಾಂಡ್‌ ಅಪ್‌ ಪೆಡಲ್‌ ರೇಸ್‌, ಕಯಾಕ್‌ ರೇಸ್‌, ನಾಡದೋಣಿ ರೇಸ್‌, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೀಫುಡ್‌ ಉತ್ಸವ ನಡೆಯಲಿದೆ. ಜ.10,11ರಂದು ಪಿಲಿಕುಳ ಗಾಲ್ಫ್‌ ಮೈದಾನದಲ್ಲಿ ಗಾಲ್ಫ್‌ ಟೂರ್ನಮೆಂಟ್‌, ಜ.17ರಿಂದ 19ರವರೆಗೆ ಪಣಂಬೂರು ಬೀಚ್‌ನಲ್ಲಿ ಜಾವೇದ್‌ ಅಲಿ ನೈಟ್‌ ಮತ್ತು ಮರಳು ಶಿಲ್ಪ, ಡಿ.23ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಡಾನ್ಸ್‌ ಫೆಸ್ಟಿವಲ್‌, ಜ.17, 18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ ಎಂದರು.ಡಿ.24ರಂದು ಸೋಮೇಶ್ವರ ಬೀಚ್‌ನಲ್ಲಿ ಉದಯರಾಗ, ಬೀಚ್‌ ಯೋಗ, ಮ್ಯೂಸಿಕಲ್‌ ಸಂಜೆ ಮತ್ತು ಬ್ಯಾಂಡ್‌, ಜ.19ರಿಂದ 21ರವರೆಗೆ ಬಿಗ್‌ ಸಿನೆಮಾಸ್‌ನಲ್ಲಿ ವಿವಿಧ ಭಾಷೆಗಳ ಫಿಲ್ಮ್‌ ಫೆಸ್ಟಿವಲ್‌ ಆಯೋಜಿಸಲಾಗಿದೆ. ಡಿ.25ರಂದು ಕರಾವಳಿ ಉತ್ಸವ ಮೈದಾನದಲ್ಲಿ ಡಾಗ್‌ ಶೋ, ಜ.25ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಬೆಳಗ್ಗೆ ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಜ.26ರಂದು ಕದ್ರಿ ಪಾರ್ಕ್‌ನಲ್ಲಿ ಹೂ ಹಣ್ಣುಗಳ ಉತ್ಸವ, ಜ.30-31ರಂದು ಕದ್ರಿ ಪಾರ್ಕ್‌ನಲ್ಲಿ ಸ್ಟ್ರೀಟ್‌ ಫುಡ್‌ ಫೆಸ್ಟಿವಲ್‌ ಜರುಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಜಿಪಂ ಸಿಇಒ ವಿನಾಯಕ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ., ಡಿಸಿಎಫ್‌ ಆಂಟನಿ ಮರಿಯಪ್ಪ ಇದ್ದರು.

ಪಿಲಿಕುಳ ಕಾಂಬೊ ಪ್ಯಾಕ್‌ ಶೇ.50 ರಿಯಾಯ್ತಿ

ಕರಾವಳಿ ಉತ್ಸವ ಭಾಗವಾಗಿ ಪಿಲಿಕುಳದಲ್ಲಿ ಡಿ.20ರಿಂದ ಜ.4ರ ವರೆಗೆ ಕಾಂಬೋ ಪ್ಯಾಕ್ ಪ್ರವೇಶ ಶುಲ್ಕದಲ್ಲಿ ಶೇ.50ರ ರಿಯಾಯಿತಿ ಒದಗಿಸಲಾಗುವುದು. ಪ್ರತಿಯೊಬ್ಬರಿಗೆ 250 ರು. ಬದಲಿಗೆ 125 ರು. ವಿಧಿಸಲಾಗುವುದು. ಈ ಸಮಯದಲ್ಲಿ ಮಂಗಳೂರು- ಪಿಲಿಕುಳ ಮಧ್ಯೆ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ ಇರುತ್ತದೆ. ಡಿ.24ರಿಂದ 28ರವರೆಗೆ ಪಿಲಿಕುಳ ಪರ್ಬದಲ್ಲಿ ಆಹಾರ ಮೇಳ- ಮತ್ಸ್ಯಪ್ರದರ್ಶನ, ಡಿ.24ರಿಂದ 30ರವರೆಗೆ ಕುಶಲವಸ್ತು ಮಾರಾಟದ ಗಾಂಧಿ ಶಿಲ್ಪ ಬಜಾರ್, ಡಿ.21ರಂದು ಕಳೆದ ವರ್ಷ ಜನಿಸಿದ 2 ಹುಲಿ ಮರಿಗಳ ಪ್ರದರ್ಶನ, 25ರಂದು ವನ್ಯಜೀವಿ ಕುರಿತ ಟ್ರೆಶರ್ ಹಂಟ್, ಡಿ.27ರಂದು ಪಕ್ಷಿ ವೀಕ್ಷಣಾ ಪ್ರವಾಸ, 28ರಂದು ಉರಗ ಜಾಗೃತಿ ಕಾರ್ಯಕ್ರಮ, 29ರಂದು ವಿಜ್ಞಾನದಲ್ಲಿ ಮನರಂಜನೆ ಪ್ರದರ್ಶನ, 30ಕ್ಕೆ ವಿಜ್ಞಾನ ರಸಪ್ರಶ್ನೆ, ಜ.1ರಂದು ವಾಟರ್ ರಾಕೆಟ್ ಪ್ರಾತ್ಯಕ್ಷಿಕೆ, ಜ.2ರಂದು ಡ್ರೋನ್ ಶೋ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಡಿ.31ರಂದು ತಾರಾಲಯದಲ್ಲಿ ಆಸ್ಟ್ರೋನಮಿ ಲೈವ್ ಶೋ, ಡಿ.28ಕ್ಕೆ ಯಕ್ಷಗಾನ ಬೊಂಬೆಯಾಟ ಸಂಸ್ಕೃತಿ ಗ್ರಾಮದಲ್ಲಿ, ಡಿ.20ರಿಂದ ಜ.1ರ ವರೆಗೆ ಸಸ್ಯಗಳ ಪ್ರದರ್ಶನ ಮಾರಾಟ ಬೊಟಾನಿಕಲ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದರು.