ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ‘ಬಿತ್ತಿ ದಿನಾಚರಣೆ‘

| Published : Jul 02 2025, 11:47 PM IST

ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ‘ಬಿತ್ತಿ ದಿನಾಚರಣೆ‘
Share this Article
  • FB
  • TW
  • Linkdin
  • Email

ಸಾರಾಂಶ

ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ‘ಬಿತ್ತಿ’ ಗೋಡೆ ಬರಹ ಪತ್ರಿಕೆಯ ಬಿತ್ತಿ ದಿನಾಚರಣೆಯಲ್ಲಿ ವಾರ್ಷಿಕ ಸಂಚಿಕೆಯನ್ನು ಲೇಖಕ, ಕಾವೂರು ಬಿಜಿಎಸ್‌ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಸಿ ಕುಂಜೂರು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಇಂದು ಕನ್ನಡದಲ್ಲಿ ಬರೆಯುತ್ತಿರುವ ಹೆಚ್ಚಿನೆಲ್ಲಾ ಬರಹಗಾರರಿಗೆ ಅವರ ಬಾಲ್ಯದ ದಿನಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಇದ್ದ ಬಿತ್ತಿ ಪತ್ರಿಕೆಗಳೇ ಮೂಲ ಪ್ರೇರಣೆ. ಅಲ್ಲಿ ಬರವಣಿಗೆ ಆರಂಭಿಸಿ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ಲೇಖಕರಾಗಿದ್ದಾರೆ. ಆರಂಭಿಕ ಬರವಣಿಗೆಗೆ ಬಿತ್ತಿ ಪತ್ರಿಕೆಯೇ ಮೂಲ ಎಂದು ಲೇಖಕ, ಕಾವೂರು ಬಿಜಿಎಸ್‌ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಸಿ ಕುಂಜೂರು ಹೇಳಿದ್ದಾರೆ.ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ‘ಬಿತ್ತಿ’ ಗೋಡೆ ಬರಹ ಪತ್ರಿಕೆಯ ಬಿತ್ತಿ ದಿನಾಚರಣೆಯಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬರಹಗಾರರಾಗಬೇಕಾದವರು ನಿರಂತರ ಓದಿನ ಮೂಲಕ ಸ್ವಂತ ಆಲೋಚನ ಕ್ರಮವನ್ನು ರೂಢಿಸಿಕೊಳ್ಳಬೇಕು ಹಾಗೂ ನನ್ನ ಬರವಣಿಗೆ ಸಮಾಜಕ್ಕೆ, ಮಾನವತೆಗೆ ಏನು ನೀಡುತ್ತದೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು ಎಂದರು.ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಸೋಮಣ್ಣ ಹೊಂಗಳ್ಳಿ, ಡಾ.ಧನಂಜಯ ಕುಂಬ್ಳೆ, ಡಾ.ಯಶುಕುಮಾರ್ ಬರವಣಿಗೆಯ ಭಾವ, ಸಂವೇದನೆ, ಜವಾಬ್ದಾರಿ ಮತ್ತು ಕೌಶಲದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ, ವಿ.ವಿ.ಯಲ್ಲಿ ಕನ್ನಡ ವಿಭಾಗದ ಬಿತ್ತಿ ಪತ್ರಿಕೆಗೆ ಶ್ರೀಮಂತ ಪರಂಪರೆಯಿದೆ. ಹೊಸ ಬರಹಗಾರರನ್ನು ರೂಪಿಸುವಲ್ಲಿ ಭಿತ್ತಿ ಪತ್ರಿಕೆಗೆ ಮಹತ್ವದ ಪಾತ್ರವಿದೆ ಎಂದರು.ದಿ.ಗುಂಡ್ಮಿ ಚಂದ್ರಶೇಖರ ಐತಾಳ ನೆನಪಿನ ಬಹುಭಾಷಾ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಕವಿತಾ ವಾಚನ ಮಾಡಿದರು. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದ ವೀಕ್ಷಿತಾ ಇವರನ್ನು ಸನ್ಮಾನಿಸಲಾಯಿತು. ಬಿತ್ತಿ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಿತ್ತಿ ಸಂಪಾದಕಿ ಸಂಧ್ಯಾ ಎನ್ ಸ್ವಾಗತಿಸಿದರು. ಉಪ ಸಂಪಾದಕಿ ಪ್ರತೀಕ್ಷಾ ವಂದಿಸಿದರು. ಸೌಮ್ಯ ಪಿ.ಪಿ. ನಿರೂಪಿಸಿದರು.