ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುಳು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

| Published : Apr 24 2025, 11:47 PM IST

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುಳು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಮಹಾವೀರ ಕಾಲೇಜು ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಇಲ್ಲಿನ ಮಹಾವೀರ ಕಾಲೇಜಿನಲ್ಲಿ ‘ತುಳುನಾಡ ಸಿರಿ ಮದಿಪು-೨೦೨೫’ ಸಾಂಸ್ಕತಿಕ ವೈಭವ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತುಳು ಭಾಷೆ ವಿಶಾಲವಾದ ವ್ಯಾಪ್ತಿ ಹೊಂದಿದ ಇರುವ ಭಾಷೆಯಾಗಿದೆ. ಶಾಲಾ ಕಾಲೇಜುಗಳಲ್ಲಿ ತುಳುವಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಸಂಸ್ಕೃತಿ ಅರಿವು ಮೂಡುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಮಹಾವೀರ ಕಾಲೇಜು ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಇಲ್ಲಿನ ಮಹಾವೀರ ಕಾಲೇಜಿನಲ್ಲಿ ನಡೆದ ‘ತುಳುನಾಡ ಸಿರಿ ಮದಿಪು-೨೦೨೫’ ಸಾಂಸ್ಕತಿಕ ವೈಭವ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದ್ದ ತುಳು ಸಾಹಿತ್ಯ, ಸಂಸ್ಕತಿ ಕುರಿತಾದ ಪುಸ್ತಕ ಪ್ರದರ್ಶನವನ್ನೂ ಅವರು ಉದ್ಘಾಟಿಸಿದರು. ತುಳು ಸಂಘ, ತುಳು ಕೂಟಗಳಿಗೆ ಸರ್ಕಾರದ ಆಶ್ರಯ ದೊರೆತಾಗ ಭಾಷೆ ಬೆಳೆಯಲು ಸಹಕಾರಿಯಾಗುತ್ತದೆ. ತುಳುನಾಡಿನ ಸಂಸ್ಕೃತಿ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿವೆ. ಹಿಂದಿನ ತಲೆಮಾರಿನ ಆಚಾರ-ವಿಚಾರ, ನಡೆ-ನುಡಿ, ಸಂಪ್ರದಾಯಗಳು ಇಂದಿನ ತಲೆಮಾರಿಗೆ ಅರಿವಾಗಬೇಕಾದರೆ ಇಂತಹ ಸ್ಪರ್ಧೆಗಳು ಅವಶ್ಯಕ. ತುಳು ಸಂಸ್ಕೃತಿ ಎಂದರೆ ದೈವಾರಾಧನೆ ಎದುರು ಛಾಯಾಚಿತ್ರ ತೆಗೆಯುವುದಕ್ಕೆ ಮಾತ್ರ ಸೀಮಿತವಾಗಬಾರದು. ಅದು ತುಳು ಬದುಕಾಗಿ ಮಾರ್ಪಾಡಾಗಬೇಕು. ಹಿರಿಯರ ಜ್ಞಾನ ಭಂಡಾರದಿಂದ ಹೊಸ ತಲೆಮಾರಿಗೆ ಆ ಜ್ಞಾನವನ್ನು ಪಸರಿಸುವ ಕಾರ್ಯ ನಡೆಯಬೇಕಿದೆ ಎಂದು ಅವರು ಆಶಿಸಿದರು.

ಅಧ್ಯಕ್ಷತೆ ವಹಿಸಿದ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮಾತನಾಡಿ, ತುಳು ಸಂಸ್ಕೃತಿ ಉಳಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳು ತುಳು ಭಾಷೆ ಗೌರವಿಸಿ, ಪ್ರಾಮಾಣಿಕರಾಗಿ, ವಿದ್ಯಾವಂತರಾಗಿ ಹೊರಹೊಮ್ಮಬೇಕು ಎಂದರು.

ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಛಾಯಾಗ್ರಾಹಕ ಎಂ. ರಾಮ ಕೋಟ್ಯಾನ್‌ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಅಂತಿಮ ಬಿ.ಸಿ.ಎ. ವಿದ್ಯಾರ್ಥಿ ಕಾರ್ತಿಕ್ ಶೆಟ್ಟಿ ದೈವ ಮದ್ಯಸ್ಥಿಕೆಯಲ್ಲಿ ಭಾಗವಹಿಸುವ ಸಲುವಾಗಿ ಗುರುತಿಸಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಪ್ರಾಸ್ತಾವಿಕ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಉಪಾಧ್ಯಾಕ್ಷ ಸಂಪತ್ ಸಾಮ್ರಾಜ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ., ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ಕಾರ್ಯಕ್ರಮ ಸಂಯೋಜಕ ರಶ್ಮಿತಾ, ಶಾರದಾ, ಸಂದೀಪ್, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ನಾಯಕಿ ಶ್ರುತಿ ಎಸ್. ಪೇರಿ, ತುಳು ಸಂಘದ ಕಾರ್ಯದರ್ಶಿ ದೀಪಶ್ರೀ, ವಿದ್ಯಾರ್ಥಿ ಸಂಯೋಜಕರಾದ ರೋಹಿಸ್ಟನ್ ಪಿಂಟೋ, ಕಾರ್ತಿಕ್ ಶೆಟ್ಟಿ, ಸಚಿನ್, ಪ್ರಜ್ವಲ್ ರಾವ್, ಕಿರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಸ್ವಾಗತಿಸಿದರು. ಮುಖ್ಯ ಕಾರ್ಯಕ್ರಮ ಸಂಯೋಜಕಿ ಪೂರ್ಣಿಮಾ ವಂದಿಸಿದರು, ವಿಜಯಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು, ರಮ್ಯ ನಿರೂಪಿಸಿದರು.