ಮಂಗಳೂರು ವಿಶ್ವವಿದ್ಯಾನಿಲಯದ 44 ನೇ ವಾರ್ಷಿಕ ಘಟಿಕೋತ್ಸವವನ್ನು 2026ನೇ ಮಾರ್ಚ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಪದವಿ ಸ್ವೀಕರಿಸುವ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ.

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44 ನೇ ವಾರ್ಷಿಕ ಘಟಿಕೋತ್ಸವವನ್ನು 2026ನೇ ಮಾರ್ಚ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿದ್ದು, ನಿಖರವಾದ ದಿನಾಂಕವನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ.ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಡಿಸೆಂಬರ್ 31 ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳ ಯಾದಿಯನ್ನು ಘಟಿಕೋತ್ಸವದಲ್ಲಿ ದೃಢೀಕರಿಸಲಾಗುತ್ತದೆ. 2025 ನೇ ಅಕ್ಟೋಬರ್/ನವೆಂಬರ್, ಡಿಸೆಂಬರ್ ತಿಂಗಳಲ್ಲಿ ನಡೆಯುವ 1,3,ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಪುನಾರಾವರ್ತಿತ ಅಭ್ಯರ್ಥಿಗಳ ಯಾದಿಯು ಸೇರುವುದಿಲ್ಲ.

ಈ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆಯಲು ಅರ್ಹರಾದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆಯ ಕಾರ್ಯಕ್ರಮಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.ಘಟಿಕೋತ್ಸವ ಸಂದರ್ಭ ವೇದಿಕೆಯಲ್ಲಿ ಗಣ್ಯರಿಂದ ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು: ಅ) ಡಾಕ್ಟರಲ್ ಡಿಗ್ರಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ರ್‍ಯಾಂಕ್‌/ಚಿನ್ನದ /ಪದಕ/ನಗದು ಬಹುಮಾನ ಪಡೆಯುವ ಸ್ನಾತಕೋತ್ತರ ಮತ್ತು ಪದವಿ ಮಟ್ಟದ ಅಭ್ಯರ್ಥಿಗಳು.ಸಭಾ ಕಾರ್ಯಕ್ರಮ ಮುಗಿದ ನಂತರ ಪದವಿ ಪ್ರಮಾಣ ಪತ್ರ ಸ್ವೀಕರಿಸುವ ವಿದ್ಯಾರ್ಥಿಗಳು: ಪದವಿ/ ಸ್ನಾತಕೋತ್ತರ ಪದವಿಯಲ್ಲಿ 6 ಮತ್ತು 6 ಕ್ಕಿಂತ ಹೆಚ್ಚಿನ ಸರಾಸರಿ ಸಂಚಿತ ಪಡೆದು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆನ್‍ಲೈನ್ ನೋಂದಣಿ ಮಾಡಿಕೊಂಡ ಎಲ್ಲ ಸ್ನಾತಕ/ಸ್ನಾತಕೋತ್ತರ ಅಭ್ಯರ್ಥಿಗಳು. ಬಿ.ಪಿ.ಎಡ್. ಮತ್ತು ಬಿ.ಎಡ್. ಪದವೀಧರರನ್ನು ಸ್ನಾತಕೋತ್ತರ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದಿಲ್ಲ. ಈ ವಿಷಯದಲ್ಲಿ ಪದಕ/ಬಹುಮಾನ ಪಡೆಯಲು ಅರ್ಹರಾದ ಮತ್ತು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮಾತ್ರ ಘಟಿಕೋತ್ಸವಕ್ಕೆ ಪ್ರವೇಶ ಪಡೆಯಲು ಅರ್ಹರು.

ಅರ್ಹ ಅಭ್ಯರ್ಥಿಗಳು ಪದವಿಯನ್ನು ಘಟಿಕೋತ್ಸವದಲ್ಲಿ ಹಾಜರಿ ಅಥವಾ ಗೈರುಹಾಜರಿಯಲ್ಲಿ ಪಡೆದುಕೊಳ್ಳಬಹುದು. 2025ನೇ ಅಕ್ಟೋಬರ್/ನವೆಂಬರ್, ಡಿಸೆಂಬರ್ ತಿಂಗಳಲ್ಲಿ ನಡೆಯುವ 1,3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಪುನಾರಾವರ್ತಿತ ಅಭ್ಯರ್ಥಿಗಳನ್ನು ಹೊರತುಪಡಿಸಿ, ಡಿಸೆಂಬರ್ 31 ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಎಲ್ಲ ಪುನರಾವರ್ತಿತ ಅಭ್ಯರ್ಥಿಗಳು ಗೈರು ಹಾಜರಿಯಲ್ಲೇ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬೇಕು. ಘಟಿಕೋತ್ಸವದ ಅಧಿಕೃತ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ.

ಹಾಜರಿಯಲ್ಲಿ ಪದವಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಗೂಗಲ್ ಲಿಂಕ್ ಮೂಲಕ ನೊಂದಣಿಗೆ ಅವಕಾಶ ಕಲ್ಪಿಸಿ, ಕೊನೆಯ ದಿನಾಂಕದ ಬಗ್ಗೆ ಮಾಹಿತಿಯನ್ನು ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. ಹಾಜರಾತಿಯಲ್ಲಿ ಪದವಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮಾತ್ರ ಆನ್‍ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.