ಮಂಗಳೂರು ವಿವಿ ವಾಲಿಬಾಲ್‌: ಎಸ್‌ಡಿಎಂ ಕಾಲೇಜು ಚಾಂಪಿಯನ್‌

| Published : Apr 09 2024, 12:49 AM IST / Updated: Apr 09 2024, 12:50 AM IST

ಸಾರಾಂಶ

ಪಂದ್ಯಾವಳಿಯನ್ನು ಬ್ಯಾಂಕ್ ಆಫ್ ಬರೋಡದ ಪ್ರಾದೇಶಿ ಉಪಮುಖ್ಯಸ್ಥ ಪಿ. ವಿದ್ಯಾಧರ ಶೆಟ್ಟಿ ಉದ್ಘಾಟಿಸಿದರು. ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕಾಪು

ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕರ ಸ್ಮರಣಾರ್ಥ, 43ನೇ ವರ್ಷದ ವಿಶ್ವವಿದ್ಯಾಲಯ ಮಟ್ಟದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಪಂದ್ಯಾವಳಿಯನ್ನು ಬ್ಯಾಂಕ್ ಆಫ್ ಬರೋಡದ ಪ್ರಾದೇಶಿ ಉಪಮುಖ್ಯಸ್ಥ ಪಿ. ವಿದ್ಯಾಧರ ಶೆಟ್ಟಿ ಉದ್ಘಾಟಿಸಿದರು. ಬಳಿಕ ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕಿನ ಜೊತೆಗಿನ 43 ವರ್ಷದ ಸುದೀರ್ಘ ಒಡನಾಟದ ಅನುಭವವನ್ನು ಹಂಚಿಕೊಂಡ ಅವರು, ಕ್ರೀಡಾಪಟುಗಳಿಗೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಹುರಿದುಂಬಿಸಿದರು.

ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬ್ಯಾಂಕಿನ ಶಿರ್ವ ಶಾಖೆಯ ಮುಖ್ಯ ವ್ಯವಸ್ಥಾಪಕ ಅತೀಶ್ ಅಂತೋನಿ ಆಗಮಿಸಿದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ, ಕಾಲೇಜಿನ ದೈಹಿಕ ನಿರ್ದೇಶಕಿ ಸೌಮ್ಯ ಶೆಟ್ಟಿ ವೇದಿಕೆಯಲ್ಲಿ ‌ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ಸ್ವಾಗತಿಸಿದರು. ಡಾ. ಸೋನಾ ಎಚ್.ಸಿ. ವಂದಿಸಿದರು.

ಈ ಪಂದ್ಯಾವಳಿಯಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಒಟ್ಟು 17 ಕಾಲೇಜು ತಂಡಗಳು ಭಾಗವಹಿಸಿದ್ದು, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಉಜಿರೆಯ ಎಸ್.ಡಿ.ಎಂ. ಕಾಲೇಜು ಮತ್ತು ದ್ವಿತೀಯ ಸ್ಥಾನವನ್ನು ಬಸ್ರೂರು ಶಾರದಾ ಕಾಲೇಜು ತಂಡಗಳು ಮುಡಿಗೇರಿಸಿಕೊಂಡವು.

ಮಹಿಳೆಯರ ವಿಭಾಗದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ಪ್ರಥಮ ಸ್ಥಾನ ಮತ್ತು ಆತಿಥೇಯ ಎಂ.ಎಸ್.ಆರ್.ಎಸ್ ಕಾಲೇಜು ತಂಡಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಸಂಜೆ ಸಮಾರೋಪ ಸಮಾರಂಭದಲ್ಲಿ ಶಿರ್ವ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಶಕ್ತಿವೇಲು ಇ. ವಿಜೇತ ತಂಡಗಳಿಗೆ‌ ಬಹುಮಾನ ವಿತರಿಸಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯರು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.