ಸಾರಾಂಶ
ಕನ್ನಡಪ್ರಭ ವಾರ್ತೆ ಬ್ರಹ್ಮಾವರಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಇಲ್ಲಿನ ಎಸ್ಎಂಎಸ್ ಕಾಲೇಜು ಪ್ರಶಸ್ತಿ ಗೆದ್ದುಕೊಂಡಿದೆ.ಫೈನಲ್ ನಲ್ಲಿ ಬ್ರಹ್ಮಾವರ ತಂಡವು ಮೂಡುಬಿದಿರೆಯ ಆಳ್ವಾಸ್ ಕಾಲೇಜು ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆಳ್ವಾಸ್ ತಂಡವು ಎಸ್ಎಂಎಸ್ ಕಾಲೇಜಿನ ಬಿಗು ಬೌಲಿಂಗ್ ದಾಳಿ ಹಾಗೂ ಕಟ್ಟುನಿಟ್ಟಾದ ಫೀಲ್ಡಿಂಗ್ ನಿಂದಾಗಿ 8 ಓವರ್ ನಲ್ಲಿ 7 ವಿಕೆಟ್ ಗಳ ನಷ್ಟಕ್ಕೆ ಕೇವಲ 64 ರನ್ ಗಳನ್ನು ಗಳಿಸಿತು. ಗೆಲ್ಲಲು 65 ರನ್ ಗಳ ಗುರಿಯನ್ನು ಬೆನ್ನಟ್ಟಿದ ಎಸ್ಎಂಎಸ್ ತಂಡವು ಯಾವುದೇ ವಿಕೇಟ್ ಕಳೆದುಕೊಳ್ಳದೇ ಕೇವಲ 6.1 ಓವರ್ ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಎಸ್ಎಂಎಸ್ ಕಾಲೇಜಿನ ಲಕ್ಷ್ಮಿ ಹಾಗೂ ನಾಯಕಿ ಸ್ವರ್ಣ ಗೌರಿ ಅಮೋಘವಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು.ಈ ಮೊದಲು ಸೆಮಿ ಫೈನಲ್ ನಲ್ಲಿಯೂ ಎಸ್ಎಂಎಸ್ ಕಾಲೇಜು ತಂಡವು ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು ತಂಡದ ವಿರುದ್ಧ 10 ವಿಕೆಟ್ ಗಳ ಗೆಲುವು ದಾಖಲಿಸಿತ್ತು. ಪಂದ್ಯ ಕೂಟದ ಉತ್ತಮ ಬ್ಯಾಟರ್ ಆಗಿ ಎಸ್ಎಂಎಸ್ ಕಾಲೇಜಿನ ಸ್ವರ್ಣ ಗೌರಿ ಆಯ್ಕೆಯಾದರೆ, ಪಂದ್ಯಕೂಟದ ಶ್ರೇಷ್ಠ ಆಟಗಾರ್ತಿಯಾಗಿ ಎಸ್ಎಂಎಸ್ ತಂಡದ ಲಕ್ಷ್ಮಿ ಆಯ್ಕೆಯಾದರು. ಉತ್ತಮ ಬೌಲರ್ ಪ್ರಶಸ್ತಿಯನ್ನು ರನ್ನರ್ ಅಪ್ ಆಳ್ವಾಸ್ ತಂಡದ ಸ್ನೇಹ ಪಡೆದರು. ಪಂದ್ಯಕೂಟದ ಮೂರು ಹಾಗೂ ನಾಲ್ಕನೇ ಸ್ಥಾನ ಕ್ರಮವಾಗಿ ಸೈಂಟ್ ಅಲೋಸಿಸ್ ಮಂಗಳೂರು ಹಾಗೂ ಮಂಗಳೂರು ಯುನಿವರ್ಸಿಟಿ ಕ್ಯಾಂಪಸ್ ಕಾಲೇಜುಗಳ ಪಾಲಾಯಿತು.