ಸಾರಾಂಶ
ಸತತ 20 ನೇ ಬಾರಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. 23 ಕಾಲೇಜುಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಲಯನ್ಸ್ ಅಮೃತ್ ಜಂಟಿಯಾಗಿ ಆಯೋಜಿಸಿದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಪವರ್ ಲಿಪ್ಟಿಂಗ್ ಪಂದ್ಯಾಕೂಟದಲ್ಲಿ ಸತತ 20ನೇ ಬಾರಿ ಮೂಡಬಿದೆರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಪುರುಷರ ವಿಭಾಗ ತಂಡ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರಥಮ, ಕಲ್ಯಾಣಪುರ ಮಿಲಾಗ್ರಿಸ್ ದ್ವಿತೀಯ, ಹಾಗೂ ಅತಿಥೇಯ ತೆಂಕನಿಡಿಯೂರು ಕಾಲೇಜು ತೃತೀಯ ಸ್ಥಾನಗಳಿಸಿದರೆ, ತೆಂಕನಿಡಿಯೂರು ಶರತ್ ಕೆ. ಕುಮಾರ್ ಬಲಾಡ್ಯ ಪುರುಷ ಪ್ರಶಸ್ತಿ ಪಡೆದರು.
ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ಎಸ್.ಡಿ.ಎಂ. ಉಜಿರೆ ದ್ವಿತೀಯ ಹಾಗೂ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜು ಮತ್ತು ಸೈಂಟ್ ಅಲೋಶಿಯಸ್ ಕಾಲೇಜು ತೃತೀಯ ಸ್ಥಾನ ಪಡೆದರೆ, ಅಜ್ಜರಕಾಡು ಉಡುಪಿಯ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ಐಶ್ವರ್ಯ ಬಲಾಡ್ಯ ಮಹಿಳೆ ಪ್ರಶಸ್ತಿ ಪಡೆದರು.ಮಂಗಳೂರು ವಿವಿ ವ್ಯಾಪ್ತಿಯ 23 ಕಾಲೇಜುಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ., ಪಂದ್ಯಾಕೂಟದ ಉಸ್ತುವಾರಿ ಹಾಗೂ ಅಂತಾರಾಷ್ಟ್ರೀಯ ತೀರ್ಪುಗಾರರಾದ ಡಾ. ಹರಿದಾಸ್ ಕೂಳೂರು, ಉಡುಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಪಾಟ್ಕರ್, ಆಳ್ವಾಸ್ ತರಬೇತುದಾರರಾದ ಪ್ರಮೋದ್ ಉಪಸ್ಥಿತರಿದ್ದರು.
ಪಂದ್ಯಾಕೂಟದ ಆಯೋಜಕರಾದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರೂ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿರ್ವಹಿಸಿದರು.