ಸಾರಾಂಶ
ರಾಷ್ಟ್ರ ಮಟ್ಟದ ಅಥ್ಲೀಟ್ ಹಾಗೂ ಖೇಲೋ ಇಂಡಿಯಾ ಪ್ರತಿನಿಧಿ ಆಯುಷ್ ದೇವಾಡಿಗ ಜ್ಯೋತಿ ಬೆಳಗಿಸುವ ಮೂಲಕ ವಾಕಥಾನ್ ಮುನ್ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರು ಕೆಎಂಸಿ ಆಸ್ಪತ್ರೆ ವತಿಯಿಂದ ಭಾನುವಾರ ವಾಕಥಾನ್ ಆಯೋಜಿಸಲಾಗಿತ್ತು.ಕಾರ್ಯಕ್ರಮವು ಬೆಳಗ್ಗೆ 6.30ಕ್ಕೆ ಕೆಎಂಸಿ ಆಸ್ಪತ್ರೆಯಿಂದ ಆರಂಭಗೊಂಡು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಕಪ್ರಿಗುಡ್ಡದ ಕ್ರೀಡಾ ಸಂಕೀರ್ಣದಲ್ಲಿ ಸಮಾಪನಗೊಂಡಿತು. ಫಿಟ್ನೆಸ್ ಉತ್ಸಾಹಿಗಳು, ಯುವಕರು, ವೃದ್ಧರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 1,200ಕ್ಕೂ ಹೆಚ್ಚು ಮಂದಿ ವಾಕಥಾನ್‌ನಲ್ಲಿ ಪಾಲ್ಗೊಂಡು ಹೃದಯ ರಕ್ತನಾಳದ ಆರೋಗ್ಯದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಿದರು.
ವಾಕಥಾನ್‌ಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳೂರು ನಗರ ಪೊಲೀಸ್ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಚಾಲನೆ ನೀಡಿದರು. ರಾಷ್ಟ್ರ ಮಟ್ಟದ ಅಥ್ಲೀಟ್ ಹಾಗೂ ಖೇಲೋ ಇಂಡಿಯಾ ಪ್ರತಿನಿಧಿ ಆಯುಷ್ ದೇವಾಡಿಗ ಜ್ಯೋತಿ ಬೆಳಗಿಸುವ ಮೂಲಕ ವಾಕಥಾನ್ ಮುನ್ನಡೆಸಿದರು. ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋ ಎಸಿಪಿ ಗೀತಾ ಕುಲಕರ್ಣಿ, ಜಿಲ್ಲಾ ಆರೋಗ್ಯ ಇಲಾಖೆಯ ಡಾ.ನವೀನ್ ಕುಲಾಲ್, ಮಂಗಳೂರು ಐಎಂಎ ಅಧ್ಯಕ್ಷ ಡಾ.ರಂಜನ್, ರೋಟರಿಯ ವಿಕ್ರಮ ದತ್ತ ಇದ್ದರು.ಹೃದಯ ಆರೋಗ್ಯದ ಮಹತ್ವದ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಪೈ, ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವಾಗ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಅತ್ಯಂತ ಮುಖ್ಯ. ಈ ಕುರಿತು ಜಾಗೃತಿ ಮೂಡಿಸಲು ವಾಕಥಾನ್ ಉತ್ತಮ ವೇದಿಕೆ ಒದಗಿಸಿದೆ ಎಂದರು.
ಮಾಹೆ- ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ. ನಾಯ್ಕ್, ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸಾ ತಂಡದ ಡಾ.ಮನೀಶ್ ರೈ, ಡಾ.ರಾಜೇಶ್ ಭಟ್, ಡಾ.ವಿಜಯ್, ಡಾ.ಹರೀಶ್ ಆರ್, ಡಾ.ಈರೇಶ್ ಶೆಟ್ಟಿ ಇದ್ದರು.