ಸಾರಾಂಶ
ಭಾನುವಾರ ಮಧ್ಯಾಹ್ನ ಪಂಜಾಬ್ ಕಿಂಗ್ಸ್--ಚೆನ್ನೆ ಸೂಪರ್ ಕಿಂಗ್ಸ್ ಮತ್ತು ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವೂ ನೇರ ಪ್ರಸಾರವೂ ಇಲ್ಲಿ ಏರ್ಪಾಟಾಗಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕ್ರಿಕೆಟ್ ಪ್ರೇಮಿಗಳು ತಮ್ಮಿಷ್ಟದ ಆಟಗಾರರನ್ನು ದೊಡ್ಡ ಪರದೆಯ ಮೇಲೆ ಕಂಡಾಗ ಸಂಭ್ರಮಿಸುವ ಸನ್ನಿವೇಶಗಳಿಗೆ ಸಾಕ್ಷಿಯಾದದ್ದು ಐಪಿಎಲ್ ಫ್ಯಾನ್ ಪಾರ್ಕ್.ಶನಿವಾರ ಮತ್ತು ಭಾನುವಾರ ನಡೆದ ಪಂದ್ಯಗಳನ್ನು ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಪರದೆಯ ಮೂಲಕ ನೋಡುವ ಅವಕಾಶವನ್ನು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಬಿಸಿಸಿಐ ‘ಫ್ಯಾನ್ ಪಾರ್ಕ್’ ಮೂಲಕ ಕಲ್ಪಿಸಿತ್ತು.
ಬೆಂಗಳೂರಿನಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವನ್ನು ನೋಡಿ ಕ್ರಿಕೆಟ್ ಪ್ರೇಮಿಗಳು ಸಂಭ್ರಮಪಟ್ಟರು. ಸಂಜೆ ಸುಮಾರು 6.30ರ ವೇಳೆಗೆ ಮೈದಾನದ ಗೇಟ್ ತೆರೆದುಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳು ತಂಡೋಪ ತಂಡವಾಗಿ ಫ್ಯಾನ್ ಪಾರ್ಕ್‌ಗೆ ಆಗಮಿಸಿದರು. ತಮ್ಮ ನೆಚ್ಚಿನ ತಂಡ ಉತ್ತಮ ಪ್ರದರ್ಶನ ನೀಡುವಾಗ ಸಾವಿರಾರು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.ಭಾನುವಾರ ಮಧ್ಯಾಹ್ನ ಪಂಜಾಬ್ ಕಿಂಗ್ಸ್--ಚೆನ್ನೆ ಸೂಪರ್ ಕಿಂಗ್ಸ್ ಮತ್ತು ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವೂ ನೇರ ಪ್ರಸಾರವೂ ಇಲ್ಲಿ ಏರ್ಪಾಟಾಗಿತ್ತು.
ಫ್ಯಾನ್ ಪಾರ್ಕ್‌ಗಾಗಿ ಕರಾವಳಿ ಉತ್ಸವ ಮೈದಾನದಲ್ಲಿ 18 ಅಡಿ ಎತ್ತರ 36 ಅಡಿ ಅಗಲದ ಬೃಹತ್ ಪರದೆ ಅಳವಡಿಸಲಾಗಿತ್ತು. ಮಕ್ಕಳ ಮನರಂಜನೆಗಾಗಿ 360 ಡಿಗ್ರಿ ಸೆಲ್ಫಿ ಗ್ಯಾಲರಿ, ಫೇಸ್ ಪೈಂಟಿಂಗ್, ಬಂಗಿ ಜಂಪ್, ಕ್ರಿಕೆಟ್ ನೆಟ್ಸ್ ಮತ್ತಿತರ ಆಟೋಟ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಅದೃಷ್ಟವಂತರಿಗೆ ಭಾರತೀಯ ಕ್ರಿಕೆಟ್ ಆಟಗಾರರು ಸಹಿ ಹಾಕಿದ ಜೆರ್ಸಿ ಉಡುಗೊರೆಯಾಗಿ ನೀಡಲಾಯಿತು.