ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆಯ ಭಾವನೆ ಕಟ್ಟಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶೇಖರ ಎಚ್. ಟೆಕ್ಕಣ್ಣನವರ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆಯ ಭಾವನೆ ಕಟ್ಟಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶೇಖರ ಎಚ್. ಟೆಕ್ಕಣ್ಣನವರ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.

ನಗರದ ವೀರ ಮದಕರಿ ನಾಯಕ ವೃತ್ತದ ಬಳಿ ಎಸ್‌ಪಿ ಡಾ. ಎಚ್.ಟಿ.ಶೇಖರ್ ನೇತೃತ್ವದಲ್ಲಿ ಆರಂಭಗೊಂಡ ಪಥ ಸಂಚಲನವು ಅಂಬೇಡ್ಕರ್ ವೃತ್ತ, ಹಗೇದಿಬ್ಬ ಸರ್ಕಲ್‌, ಕಾಳಿಕಾ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್‌ಕೆಪಿ ರಸ್ತೆ ಮಾರ್ಗವಾಗಿ ಸಾಗಿತು. ಶಿವಾಜಿ ನಗರ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮಾರ್ಗವಾಗಿ ವೀರ ಮಂದಕರಿ ನಾಯಕರ ವೃತ್ತಕ್ಕೆ ಮರಳಿ ಪಥ ಸಂಚಲನ ಮುಕ್ತಾಯಗೊಂಡಿತು.

ಸಶಸ್ತ್ರ ಮೀಸಲು ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ನಾಗರೀಕ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಒಳಗೊಂಡಂತೆ ಮಾರ್ಗದುದ್ದಕ್ಕೂ ದುಗ್ಗಮ್ಮನ ಜಾತ್ರೆ ಭಕ್ತರು, ಸಾರ್ವಜನಿಕರು ಯಾವುದೇ ಭಯ, ಆತಂಕವಿಲ್ಲದೇ ಆಚರಿಸುವಂತೆ ಅಭಯ ನೀಡುವ ಜೊತೆಗೆ ಸಮಾಜಘಾತುಕ ಶಕ್ತಿಗಳು, ರೌಡಿ ಶೀಟರ್‌ಗಳು, ಪುಡಿ ರೌಡಿಗಳು, ಕಿಡಿಗೇಡಿಗಳಿಗೆ ಪೊಲೀಸ್ ಇಲಾಖೆಯು ಪಥ ಸಂಚಲನದ ಮೂಲಕ ಎಚ್ಚರಿಕೆ ಸಂದೇಶ‍ ರವಾನಿಸಿತು.

ರಾಜ್ಯ, ರಾಷ್ಟ್ರ, ವಿದೇಶಗಳಿಂದಲೂ ದುಗ್ಗಮ್ಮನ ಜಾತ್ರೆಗೆ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿಯಿಂದ ಅಂತಿಮ ಸಿದ್ಧತೆಗಳು ನಡೆದಿವೆ. ಪ್ರತಿಯೊಂದು ಮನೆಗಳೂ ಸುಣ್ಣ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿವೆ. ದೇವಸ್ಥಾನ ಸಮಿತಿ ಸಹ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಪಾಲಿಕೆ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಜಾತ್ರೋತ್ಸವದ ವೇಳೆ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸುತ್ತಿದೆ.

ಪಥ ಸಂಚಲನ ಸಾಗಿದ ಮಾರ್ಗದುದ್ದಕ್ಕೂ ಕೈಯಲ್ಲಿ ಲಾಠಿ, ಶಸ್ತ್ರ ಹಿಡಿದ ಆರ್‌ಎಎಫ್‌ ತಂಡದ ಅಧಿಕಾರಿ, ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು, ನಾಗರೀಕ ಪೊಲೀಸ್ ಸಿಬ್ಬಂದಿ ಪಥ ಸಂಚಲನದಲ್ಲಿ ಸಾಗುತ್ತ, ಭಕ್ತಾದಿಗಳು, ಸಾರ್ವಜನಿಕರು ಭಯಮುಕ್ತರಾಗಿ ಜಾತ್ರೆ ಆಚರಿಸುವಂತೆ ಭರವಸೆ ಮೂಡಿಸಿದರು. ಮಾರ್ಗದ ಉದ್ದಕ್ಕೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪಥ ಸಂಚಲನವನ್ನು ಸಾರ್ವಜನಿಕರು, ದಾರಿಹೋಕರು, ಮಕ್ಕಳು ನಿಂತು ನೋಡುತ್ತಿದ್ದರು. ನಗರದ ವಿವಿಧೆಡೆ ನಿತ್ಯವೂ ಪಥ ಸಂಚಲನ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಟೆಕ್ಕಣ್ಣನವರ್ ಜೊತೆಗೆ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಪೊಲೀಸ್ ನಿರೀಕ್ಷಕರಾದ ವಸಂತ, ಸುನೀಲಕುಮಾರ, ಶಿಲ್ಪಾ, ನಂಜುಂಡ ಸ್ವಾಮಿ, ಮಂಜುನಾಥ ಕುಪ್ಪೇಲೂರು, ಪಿಎಸ್ಐಗಳಾದ ರವಿನಾಯ್ಕ, ಸಚಿನ್‌, ಶಕುಂತಲಾ, ಆರ್‌ಎಎಫ್‌ ತಂಡದ ಇನ್‌ಸ್ಪೆಕ್ಟರ್ ರಾಜು, ಸಿಬ್ಬಂದಿ, ನಗರ ಪೊಲೀಸ್ ಮತ್ತು ಡಿಎಆರ್‌ ಅಧಿಕಾರಿ, ಸಿಬ್ಬಂದಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

- - -

(ಬಾಕ್ಸ್‌)

* ರೌಡಿಗಳು, ಸಮಾಜಘಾತುಕರಿಗೆ ಎಸ್‌ಪಿ ಶೇಖರ್‌ ಎಚ್ಚರಿಕೆ

- ಶಾಂತಿ, ಸಾಮರಸ್ಯಕ್ಕೆ ಭಂಗ ಬಂದರೆ ಸಹಿಸಲ್ಲ ಎಂದು ಖಡಕ್‌ ವಾರ್ನಿಂಗ್‌ ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆ ಸಾರ್ವಜನಿಕರು ಭಕ್ತಮುಕ್ತರಾಗಿ ಜಾತ್ರೆ ಸಂಭ್ರಮದಲ್ಲಿ ಪಾಲ್ಗೊಳ್ಳಲೆಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಮಾಡಿದ್ದೇವೆ ಎಂದು ನೂತನ ಎಸ್‌ಪಿ ಡಾ.ಶೇಖರ್ ಎಚ್. ಟೆಕ್ಕಣ್ಣನವರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರೋತ್ಸವದ ಹಿನ್ನೆಲೆ ಎಲ್ಲ ಕಡೆ ಭದ್ರತಾ ಕ್ರಮಗಳನ್ನು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಪಥ ಸಂಚಲನದಲ್ಲಿ ಆರ್‌ಎಎಪ್ ಜೊತೆಗೆ ನಮ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಸುಮಾರು 2 ಕಿಮೀ ರೂಟ್ ಮಾರ್ಚ್ ಮಾಡಿದ್ದೇವೆ ಎಂದರು.

ಜಿಲ್ಲಾ ಕೇಂದ್ರದ ವಿವಿಧೆಡೆ, ಬೇರೆ ಬೇರೆ ಪ್ರದೇಶಗಳಲ್ಲಿ ನಿರಂತರವಾಗಿ ಇಲಾಖೆಯಿಂದ ಪಥ ಸಂಚಲನ ನಡೆಸಲಾಗುವುದು. ಉದ್ದೇಶ ಯಾವುದೇ ಇದ್ದರೂ ಕಾನೂನು, ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನರಲ್ಲಿ ಸುರಕ್ಷತೆಯ ಭರವಸೆ ಮೂಡಿಸುವುದಾಗಿದೆ. ಜಾತ್ರೆ, ಆಚರಣೆ, ಸಾಂಸ್ಕೃತಿಕ ಸಂಭ್ರಮ ಯಾವುದೇ ಇದ್ದರೂ ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು ಎಂಬುದು ಇಲಾಖೆ ಉದ್ದೇಶ ಎಂದು ಹೇಳಿದರು.

ಸಾರ್ವಜನಿಕರಲ್ಲಿ ಇರುವಂತಹ ಭಯದ ವಾತಾವರಣ ನಿವಾರಿಸಿ, ಭರವಸೆಯಿಂದ ಹಬ್ಬ, ಜಾತ್ರೆ ಆಚರಿಸಲು ಪಥ ಸಂಚಲನ ಸಹಕಾರಿಯಾಗಲಿದೆ. ದಾವಣಗೆರೆ ನಗರ, ಜಿಲ್ಲೆಯ ಸಮಾಜಘಾತುಕ ಶಕ್ತಿಗಳು, ರೌಡಿಗಳು, ರೌಡಿ ಶೀಟರ್‌ಗಳು, ಪುಡಿ ರೌಡಿಗಳು, ಕಿಡಿಗೇಡಿಗಳು ಸೇರಿದಂತೆ ಹಬ್ಬದ ವಾತಾವರಣವನ್ನು ಕದಡುವವರಿಗೆ ಎಚ್ಚರಿಕೆ ನೀಡುವುದು ಸಹ ಪಥ ಸಂಚಲನದ ಉದ್ದೇಶ ಎಂದು ಜಿಲ್ಲಾ ಎಸ್‌ಪಿ ಅವರು ಸ್ಪಷ್ಟಪಡಿಸಿದರು.

- - -

-16ಕೆಡಿವಿಜಿ3, 4.ಜೆಪಿಜಿ:

ಶ್ರೀ ದುಗ್ಗಮ್ಮನ ಜಾತ್ರೆ ಅಂಗವಾಗಿ ಪೊಲೀಸ್ ಇಲಾಖೆಯಿಂದ ಜಿಲ್ಲಾ ನೂತನ ಎಸ್‌ಪಿ ಡಾ.ಶೇಖರ್ ಎಚ್. ಟೆಕ್ಕಣ್ಣನವರ್ ನೇತೃತ್ವದಲ್ಲಿ ಸೋಮವಾರ ದಾವಣಗೆರೆ ಹಳೇ ಭಾಗದಲ್ಲಿ ಪಥ ಸಂಚಲನ ನಡೆಯಿತು.