ಚಂಡಮಾರುತ ಅಬ್ಬರಕ್ಕೆ ತತ್ತರಿಸಿದ ಮಂಗಳೂರು, ವಿವಿಧೆಡೆ ಹಾನಿ

| Published : Dec 04 2024, 12:31 AM IST

ಚಂಡಮಾರುತ ಅಬ್ಬರಕ್ಕೆ ತತ್ತರಿಸಿದ ಮಂಗಳೂರು, ವಿವಿಧೆಡೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆಂಗಲ್‌ ಚಂಡಮಾರುತದ ಪರಿಣಾಮ ಕ್ಷೀಣಿಸುತ್ತಾ ಬರುತ್ತಿದೆ. ಆದರೂ ದಕ್ಷಿಣ ಕನ್ನಡ ಜಿಲ್ಲೆಗೆ ಡಿ.4ರಂದು ಸಾಧಾರಣ ಮಳೆಯಾಗುವ ಹಳದಿ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಫೆಂಗಲ್‌ ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದ್ದು, ವಿವಿಧೆಡೆ ಮನೆಗಳಿಗೆ ಹಾನಿ, ತಡೆಗೋಡೆ ಕುಸಿತ ಸಂಭವಿಸಿದ್ದರೆ, ಕೃತಕ ಪ್ರವಾಹ ಉಂಟಾಗಿ ಸಮಸ್ಯೆಯಾಗಿದೆ.

ಅದ್ಯಪಾಡಿಯಲ್ಲಿ ಏರ್‌ಪೋರ್ಟ್‌ನಿಂದ ಹೊರಬಿಟ್ಟ ನೀರಿನೊಂದಿಗೆ ಭಾರೀ ಮಣ್ಣು ಕೊಚ್ಚಿ ರಸ್ತೆ ಮೇಲೆ ಬಿದ್ದಿದ್ದು, ಮಂಗಳವಾರ ಮಧ್ಯಾಹ್ನದವರೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಕೋಪ ತೋರಿದ ಫೆಂಗಲ್‌ ಚಂಡಮಾರುತ ಮಂಗಳವಾರ ಮಧ್ಯಾಹ್ನ ಬಳಿಕ ಶಾಂತವಾಗಿದ್ದು, ಜಿಲ್ಲೆಯ ಜನಜೀವನ ಯಥಾಸ್ಥಿತಿಗೆ ಮರಳಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲೆಯ ಅಂಗನವಾಡಿ, ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬುಧವಾರ (ಡಿ.4ರಂದು) ಸಾಧಾರಣ ಮಳೆಯಾಗುವ ಹಳದಿ ಅಲರ್ಟ್‌ ಘೋಷಿಸಲಾಗಿದೆ.

ಅದ್ಯಪಾಡಿ ರಸ್ತೆ ಸಂಪರ್ಕ ಕಡಿತ:

ಭಾರೀ ಮಳೆಯ ಕಾರಣ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ತುಂಬಿದ ಭಾರೀ ನೀರನ್ನು ಏಕಾಏಕಿ ಹೊರಬಿಡಲಾಗಿತ್ತು. ಈ ನೀರಿನೊಂದಿಗೆ ಗುಡ್ಡದ ಭಾರೀ ಮಣ್ಣು ಕೊಚ್ಚಿಕೊಂಡು ಸೋಮವಾರ ತಡರಾತ್ರಿಯಿಂದ ಆದ್ಯಪಾಡಿ ರಸ್ತೆ ಮೇಲೆ ಮಣ್ಣು ತುಂಬಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೀರು- ಮಣ್ಣಿನ ರಭಸಕ್ಕೆ ಹಲವು ವಿದ್ಯುತ್‌ ಕಂಬಗಳು ಉರುಳಿಬಿದ್ದಿದ್ದವು. ಸೋಮವಾರ ಬೆಳಗ್ಗೆ ತಹಸೀಲ್ದಾರ್‌ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮಣ್ಣು ತೆರವುಗೊಳಿಸಿದರು. ಮಧ್ಯಾಹ್ನದ ವೇಳೆಗೆ ಸಂಚಾರ ಯಥಾಸ್ಥಿತಿಗೆ ಮರಳಿತ್ತು. ವಿದ್ಯುತ್‌ ಸಂಪರ್ಕವನ್ನೂ ಪುನರ್‌ಸ್ಥಾಪನೆ ಮಾಡಲಾಗಿದೆ.

ಏರ್‌ಪೋರ್ಟ್‌ ಆಡಳಿತದ ಅವಾಂತರದಿಂದ, ನೀರು ಹರಿಯಬಿಟ್ಟ ಪ್ರದೇಶದಲ್ಲಿದ್ದ ಉಮಾನಾಥ ಸಾಲ್ಯಾನ್‌ ಎಂಬವರ ಮನೆ ಆವರಣಕ್ಕೂ ಭಾರೀ ಕೆಸರು- ಮಣ್ಣು ನುಗ್ಗಿದ್ದು ಮನೆ ಮಂದಿ ಕಂಗಾಲಾಗಿದ್ದರು. ಏರ್‌ಪೋರ್ಟ್‌ ಅಧಿಕಾರಿಗಳೊಂದಿಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಹಾನಿಯ ಅಂದಾಜು ಲೆಕ್ಕಾಚಾರ ನಡೆಸಿದ್ದಾರೆ. ಏರ್‌ಪೋರ್ಟ್‌ ವತಿಯಿಂದಲೇ ಪರಿಹಾರ ಭರಿಸುವ ಕುರಿತು ಚಿಂತನೆ ನಡೆದಿದೆ.

ವರದಿ ನೀಡಲು ಸೂಚನೆ:

ಏರ್‌ಪೋರ್ಟ್‌ ಆಡಳಿತದ ಅವಾಂತರದಿಂದ ಉಂಟಾದ ಭಾರೀ ಹಾನಿಗೆ ವೈಜ್ಞಾನಿಕ ಕಾರಣ ಮತ್ತು ಪರಿಹಾರದ ಕುರಿತಾಗಿ ಏರ್‌ಪೋರ್ಟ್‌ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ವರದಿ ನೀಡಲು ಜಿಲ್ಲಾಡಳಿತ ಸೂಚಿಸಿದೆ. ಕಳೆದ ಮಳೆಗಾಲದಲ್ಲಿ ಕೂಡ ಏರ್‌ಪೋರ್ಟ್‌ ಮೇಲ್ಭಾಗದ ನೀರು ಬಿಟ್ಟ ಪರಿಣಾಮ ಶ್ರೀದೇವಿ ಕಾಲೇಜು ಪಕ್ಕದ ಗದ್ದೆ, ತೋಟ, ಮನೆಗಳಿಗೆ ಹಾನಿ ಉಂಟಾಗಿತ್ತು.

ವಿವಿಧೆಡೆ ಹಾನಿ:

ನಿರಂತರ ಸುರಿದ ಮಳೆಯಿಂದ ಮಂಗಳೂರು ನಗರದ ಕರಂಗಲ್ಪಾಡಿ ಸಿ.ಜಿ. ಕಾಮತ್‌ ರಸ್ತೆಯಲ್ಲಿ ಮುಂಜಾನೆ ವೇಳೆ ಭಾರೀ ಪ್ರವಾಹ ನೀರು ನುಗ್ಗಿ ಒಂದೆರಡು ಮನೆಗಳ ತಡೆಗೋಡೆ ಕುಸಿದಿದೆ. ನೀರು ಹರಿದುಹೋಗಲು ಜಾಗವಿಲ್ಲದೆ ಮನೆಗಳ ಆವರಣಕ್ಕೂ ನುಗ್ಗಿ ಮನೆ ಮಂದಿ ಪ್ರಯಾಸಪಟ್ಟರು.

ನಗರದ ದೇರೆಬೈಲ್‌ ಕೊಂಚಾಡಿಯ ಲ್ಯಾಂಡ್‌ ಲಿಂಕ್ಸ್‌ ನವನಗರದಲ್ಲಿ ಕಾಲುವೆ ಬದಿಗೆ ಕಟ್ಟಿದ್ದ ತಡೆಗೋಡೆ ಕುಸಿದು ರಸ್ತೆ ಅಪಾಯಕ್ಕೆ ಸಿಲುಕಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಸವಾಲಾಗಿದ್ದು, ನೂತನ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಉಳಿದಂತೆ ಅಲ್ಲಲ್ಲಿ ಮರಗಳು, ಮರಗಳ ಗೆಲ್ಲು ಕಡಿದು ಬಿದ್ದ ಘಟನೆ ನಡೆದಿದ್ದು, ಇದರಿಂದ ಹಾನಿ ಸಂಭವಿಸಿದ ಕುರಿತು ವರದಿಯಾಗಿಲ್ಲ. ಉಳ್ಳಾಲ ಬೋಳಿಯಾರಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದರೆ, ಬಂಟ್ವಾಳದಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿ ಸಂಭವಿಸಿದೆ. ಗುಡುಗು, ಸಿಡಿಲು, ಗಾಳಿಯಿಂದಾಗಿ ಮೆಸ್ಕಾಂನ 30ಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದ್ದು, ಬಹಳಷ್ಟು ಕಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಹೆದ್ದಾರಿ ಬದಿ ಕುಸಿತ:

ಮಂಗಳೂರು- ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ಗೇಲ್‌ ಕಂಪೆನಿಯ ಕಾಮಗಾರಿ ಅವ್ಯವಸ್ಥೆಯಿಂದ ಹೆದ್ದಾರಿ ಬದಿ ಕುಸಿದು ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಹೆದ್ದಾರಿ ಬದಿಯಲ್ಲಿ ಗೇಲ್‌ ಗ್ಯಾಸ್‌ ಪೈಪ್‌ಲೈನ್‌ಗೆ ಗುಂಡಿ ತೋಡಲಾಗಿತ್ತು. ಮಳೆಯಿಂದ ಈ ಗುಂಡಿಯಲ್ಲಿ ನೀರು ತುಂಬಿ ಹೆದ್ದಾರಿ ಪಕ್ಕದ ಮಣ್ಣು ಕುಸಿದು ಅನಾಹುತ ಸಂಭವಿಸಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.ತಗ್ಗು ಪ್ರದೇಶಗಳಿಗೆ ನೀರು:

ನಗರದ ಫಳ್ನೀರ್‌ ಬಳಿ ಮನೆಯಂಗಳಕ್ಕೆ ನೀರು ನುಗ್ಗಿತ್ತು. ಕೊಡಿಯಾಲ್‌ಗುತ್ತು ಎಂಪೈರ್‌ ಮಾಲ್‌ ಹಿಂದುಗಡೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿದ್ದವು. ಬಿಜೈ ನಿವಾಸಿ ಕೆ.ಉಮೇಶ್‌ ಶೇಟ್‌ ಎಂಬವರ ಮನೆ ಪಕ್ಕದ ತೋಡಿನ ತಡೆಗೋಡೆ ಕುಸಿದು ಹಾನಿಯಾಗಿದೆ. ಬಿಜೈನ ಗೀನ್‌ ಎಕರ್ಸ್‌ ಲೇಔಟ್‌ ನಿವಾಸಿ ಹಿಲ್ಡಾ ಬಾಯಮ್ಮ ಎಂಬವರ ಮನೆಯೊಳಗೆ ಚರಂಡಿ ನೀರು ಹರಿದು ಹಾನಿ ಸಂಭವಿಸಿದೆ.

ಬೋಟ್‌ ನೀರುಪಾಲು- ರಕ್ಷಣೆಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿದ್ದ 10ಕ್ಕೂ ಹೆಚ್ಚು ಬೋಟ್‌ಗಳು ನೀರುಪಾಲಾಗುವ ಹಂತದಲ್ಲಿದ್ದು, ರಕ್ಷಣೆ ಮಾಡಲಾಗಿದೆ. ಲಂಗರು ಹಾಕಿದ ಬೋಟುಗಳ ಸಂಖ್ಯೆ ಹೆಚ್ಚಿದ್ದರಿಂದ ಹಲವು ಬೋಟ್‌ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಸಂಜೆಯಿಂದ ಆರಂಭಗೊಂಡ ಮಳೆ ಜಿಲ್ಲೆಯ ಅನೇಕ ಕಡೆಗಳಲ್ಲಿ ರಾತ್ರಿಯಿಡಿ ಬಿಟ್ಟೂ ಬಿಟ್ಟು ಸುರಿದಿತ್ತು. ಮಂಗಳವಾರ ಮುಂಜಾನೆ ಕೆಲಕಾಲ ಧಾರಾಕಾರ ಗಾಳಿ- ಮಳೆ ಸುರಿಯಿತು. ಬಳಿಕ ಇಳಿಮುಖಗೊಂಡಿತ್ತು. ಮಧ್ಯಾಹ್ನ ಬಳಿಕ ಬಿಸಿಲು ಮೂಡಿದ್ದು, ಜತೆಗೆ ಮೋಡ ಕವಿದ ವಾತಾವರಣವೂ ಇತ್ತು. ಮಳೆ ಇಳಿಮುಖವಾದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಡಿ.6ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಪುತ್ತೂರು: ಸಿಡಿಲು ಬಡಿದು ವ್ಯಕ್ತಿ ಸಾವು

ಪುತ್ತೂರು: ವಿದ್ಯುತ್‌ ಬಲ್ಬ್‌ ಹಾಕುತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಮೃತಪಟ್ಟಿರುವ ಘಟನೆ ತಾಲೂಕಿನ ಕೆಯ್ಯೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.ಕೆಯ್ಯೂರು ಪಲ್ಲತ್ತಡ್ಕ ನಿವಾಸಿ ನಾರಾಯಣ (45) ಮೃತರು. ಮನೆ ಮುಂಭಾಗದಲ್ಲಿ ಹಾಕಲಾಗಿದ್ದ ಶೀಟ್‌ನಲ್ಲಿ ಬಲ್ಬ್‌ ಹೊತ್ತುತ್ತಿಲ್ಲವೆಂದು ಅದನ್ನು ತೆಗೆದು ಹಾಕುತ್ತಿದ್ದಾಗ ಸಿಡಿಲು ಆಘಾತ ಉಂಟಾಗಿ ನೆಲಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.