ಮಂಗಳೂರು; ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಎಂಬ ಶೀರ್ಷಿಕೆಯಡಿಲ್ಲಿ ಯಕ್ಷಗಾನ ವಲಯದ ವಿದ್ವಾಂಸರು, ಸಂಘಟಕರು, ಕಲಾವಿದರ ಜೊತೆಗೂಡಿ ‘ಪ್ರಸಕ್ತ ವಿದ್ಯಮಾನಗಳತ್ತ ಬೆಳಕಿನ ಕಿರಣ’ ಎಂಬ ವಿಚಾರ ಗೋಷ್ಠಿಯನ್ನು ಸಿರಿಬಾಗಿಲು ಪ್ರತಿಷ್ಠಾನ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಆಯೋಜಿಸಿರುವುದು ಸ್ತುತ್ಯರ್ಹ ಕಾರ್ಯ ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ ವಿಚಾರಗೋಷ್ಠಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಯಕ್ಷಗಾನವಲಯದ ದಿಗ್ಗಜ ವಿದ್ವಾಂಸ ಡಾ.ಎಂ.ಪ್ರಭಾಕರ್ ಜೋಶಿ ಅವರು ಪ್ರಸಂಗ ಕರ್ತ ವಿದ್ವಾಂಸ ಡಾ.ರಾಘವನ್ ನಂಬಿಯಾರ್ ಅವರು ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆಯ ಉಪನ್ಯಾಸ ನೀಡಿದರು.ಹವ್ಯಾಸಿ ಭಾಗವತ, ಉಪನ್ಯಾಸಕ ಹರಿಕೃಷ್ಣ ಹೊಳ್ಳ ಬ್ರಹ್ಮಾವರ, ಪತ್ರಕರ್ತ ಲಕ್ಷ್ಮೀ ಮಚ್ಚಿನ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ, ಕಲಾವಿದ ಉಜಿರೆ ಅಶೋಕ್ ಭಟ್‌, ಲೇಖಕ, ಅರ್ಥದಾರಿ ರಾಧಾಕೃಷ್ಣ ಕಲ್ಚಾರ್, ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ ಮೊದಲಾದವರು ವಿವಿಧ ವಿಚಾರ ಮಂಡಿಸಿದರು.

ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷೆ ಗೋಪಿಕಾ ಸತೀಶ ಮಯ್ಯ ಇದ್ದರು.

ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿದರು. ಡಾ.ಶ್ರುತಿಕೀರ್ತಿರಾಜ ಉಜಿರೆ, ಹರೀಶ ಬಳಂತಿಮುಗರು ನಿರೂಪಿಸಿದರು.


ಬಳಿಕ ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ - ಅಸಿಕಾ ಪರಿಣಯ’ ಯಕ್ಷಗಾನ ಪ್ರದರ್ಶನ ನಡೆಯಿತು.