ಸಾರಾಂಶ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜ.23ರಂದು ನಡೆಸಲಿರುವ ಪಿಎಸ್ಐ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಯಮಾವಳಿ ಪ್ರಕಟಿಸಿದ್ದು, ಸರಳ ಉಡುಪು ಧರಿಸಿ ಬರಲು ಸೂಚಿಸಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇನ್ಯಾವುದೇ ಆಭರಣಗಳನ್ನು ಧರಿಸಿ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜ.23ರಂದು ನಡೆಸಲಿರುವ ಪಿಎಸ್ಐ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಯಮಾವಳಿ ಪ್ರಕಟಿಸಿದ್ದು, ಸರಳ ಉಡುಪು ಧರಿಸಿ ಬರಲು ಸೂಚಿಸಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇನ್ಯಾವುದೇ ಆಭರಣಗಳನ್ನು ಧರಿಸಿ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.ಇತ್ತೀಚಿನ ನಿಗಮ ಮಂಡಳಿ ಪರೀಕ್ಷೆಗಳ ವೇಳೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಮುನ್ನ ಮಂಗಳಸೂತ್ರ ಮತ್ತು ಕಾಲುಂಗುರವನ್ನು ತೆಗೆಸಿದ್ದು ಭಾರೀ ವಿವಾದಕ್ಕೀಡಾಗಿತ್ತು. ಇದು ಬಹುಸಂಖ್ಯಾತ ಹಿಂದೂ ಸಂಸ್ಕೃತಿಗೆ ಅಗೌರವ ತೋರಲಾಗಿದೆ ಎಂದು ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆ ನಂತರ ಇದೀಗ ಪಿಎಸ್‌ಐ ಪರೀಕ್ಷೆಗೂ ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಿ ಬರಲು ಅವಕಾಶ ನೀಡಲಾಗಿದೆ.ಆದರೆ, ತಪಾಸಣೆ ದೃಷ್ಟಿಯಿಂದ ಪರೀಕ್ಷಾ ಸಮಯಕ್ಕೆ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಹಾಲ್ ಟಿಕೆಸ್ ಸೇರಿದಂತೆ ಸೂಚಿತ ದಾಖಲೆಗಳೊಂದಿಗೆ ಹಾಜರಿರಬೇಕು ಎಂದು ಸೂಚಿಸಿದೆ.
ಪುರುಷ ಅಭ್ಯರ್ಥಿಗಳು ಅರೆತೋಳಿನ ಅಂಗಿ, ಹೆಚ್ಚಿನ ಜೇಬುಗಳಿಲ್ಲದ ಸರಳ ಪ್ಯಾಂಟ್ ಕಡ್ಡಾಯ. ಉಡುಪಲ್ಲಿ ಜೇಬು, ದೊಡ್ಡ ಬಟನ್ಸ್ ಮತ್ತು ವಿಸ್ತಾರ ಕಸೂತಿ ಇರುವಂತಿಲ್ಲ. ಬೆಲ್ಟ್, ಶೂಗಳನ್ನು ನಿಷೇಧಿಸಲಾಗಿದೆ. ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕೈ ಕಡಗಗಳನ್ನು ಧರಿಸಿಕೊಂಡು ಬರಬಾರದು.ಮಹಿಳಾ ಅಭ್ಯರ್ಥಿಗಳಿಗೆ ವಿಪರೀತ ಕಸೂತಿ, ಹೂಗಳು, ಬ್ರೂಚ್, ಬಟನ್, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್ ಪ್ಯಾಂಟ್ ಹಾಗೂ ಶೂ, ದಪ್ಪ ಸೋಲ್‌ನ ಚಪ್ಪಲಿ ಧರಿಸಿ ಬರುವಂತಿಲ್ಲ. ಜೊತೆಗೆ ಬ್ಲೂಟೂತ್, ಪೆನ್‌ಡ್ರೈವ್, ಕೈಗಡಿಯಾರ, ಮೈಕ್ರೋಫೋನ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.