ಮಂಗಳೂರಿನ ಬ್ಯಾಂಕ್ ದರೋಡೆ ಪ್ರಕರಣ: ಮಧುರೈನಲ್ಲಿ ಮುಂಬೈ ಡೆಡ್ಲಿ ಗ್ಯಾಂಗ್‌ ತಂಡದ ಮೂವರ ಸೆರೆ

| Published : Jan 21 2025, 12:32 AM IST

ಮಂಗಳೂರಿನ ಬ್ಯಾಂಕ್ ದರೋಡೆ ಪ್ರಕರಣ: ಮಧುರೈನಲ್ಲಿ ಮುಂಬೈ ಡೆಡ್ಲಿ ಗ್ಯಾಂಗ್‌ ತಂಡದ ಮೂವರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಹೊರವಲಯದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಮೂಲದ ಮೂವರು ದರೋಡೆಕೋರರನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮಂಗಳೂರು ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ಸು ಕಂಡಿದೆ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಅತೀ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ಹೊರವಲಯದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಮೂಲದ ಮೂವರು ದರೋಡೆಕೋರರನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮಂಗಳೂರು ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ಸು ಕಂಡಿದೆ. ಈ ಪ್ರಕರಣದಲ್ಲಿ ಪರಾರಿಯಾಗಿದ್ದ ದರೋಡೆಕೋರರ ಪೈಕಿ ಓರ್ವನನ್ನು ಮುಂಬೈನಲ್ಲಿ ಹಾಗೂ ಇಬ್ಬರನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸುವಲ್ಲಿ ಪೊಲೀಸ್‌ ತಂಡ ಸಫಲವಾಗಿದೆ. ಮುಂಬೈ ಮೂಲದ ಮುರುಗಂಡಿ ತೇವರ್‌(36) ಈ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆಗಿದ್ದಾನೆ. ಡೊಂಬಿವಿಲಿ ಪಶ್ಚಿಮದ ಯೋಸುವ ಯಾನೆ ರಾಜೇಂದ್ರನ್‌(35) ಹಾಗೂಮುಂಬೈ ತಿಲಕ್‌ ನಗರದ ಕಣ್ಣನ್‌ ಮಣಿ(36) ತಮಿಳುನಾಡಿನಲ್ಲಿ ಬಂಧಿತರಾಗಿದ್ದಾರೆ. ಇವರು ಮುಂಬಯಿ ಧಾರಾವಿಯ ಡೆಡ್ಲಿ ಗ್ಯಾಂಗ್ ತಂಡದ ಸದಸ್ಯರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಧಿತರಿಂದ ಫಿಯೆಟ್‌ ಕಾರು, ಎರಡು ಗೋಣಿಚೀಲ ನಗದು, ಚಿನ್ನ, 2 ಪಿಸ್ತೂಲ್‌, ತಲ್ವಾರ್‌ ಹಾಗೂ ಇತರ ಸೊತ್ತುಗಳನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ದರೋಡೆಗಾಗಿಯೇ ಮಂಗ್ಳೂರಿಗೆ ಬಂದಿದ್ದರು:

ದರೋಡೆಕೋರರು ದರೋಡೆಗೆಂದೇ ಮಂಗಳೂರಿಗೆ ಬಂದಿದ್ದರು. ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಪರಾರಿಯಾಗಲು ಮಹಾರಾಷ್ಟ್ರ ಮೂಲದ ಫಿಯೆಟ್‌ ಕಾರು ಬಳಸಿದ್ದರು. ಆರೋಪಿ ಮುರುಗಂಡಿ ಕಾರನ್ನು ತಿರುವನ್ವೇಲಿ ವರೆಗೆ ಕೊಂಡುಹೋಗಿದ್ದನು. ಗುಪ್ತಚರ ಇಲಾಖೆಯ ನೆರವಿನಲ್ಲಿ ಈ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಸುದ್ದಿಗಾರರರಿಗೆ ತಿಳಿಸಿದರು.

ಜ.17 ರಂದು ಮಧ್ಯಾಹ್ನ ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಕೋಟೆಕಾರು ಸಹಕಾರಿ ಬ್ಯಾಂಕ್‌ಗೆ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಕೋಟ್ಯಂತರ ರು. ಮೌಲ್ಯದ ನಗ ಹಾಗೂ ನಗದು ಸೊತ್ತುಗಳನ್ನು ದರೋಡೆ ನಡೆಸಿದ್ದರು. 4 ಕೋಟಿ ರು. ಮೌಲ್ಯದ ನಗ ಹಾಗೂ ನಗದು ದರೋಡೆಯಾಗಿದೆ ಎಂದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ನೀಡಿದ ಅಧಿಕೃತ ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಬ್ಯಾಂಕ್‌ ಅಧ್ಯಕ್ಷರು 12 ಕೋಟಿಗೂ ಅಧಿಕ ಮೌಲ್ಯದ ನಗ ನಗದು ಲೂಟಿಯಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು. ದರೋಡೆ ಕೃತ್ಯದ ಬಳಿಕ ದರೋಡೆಕೋರರು ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ಪರಾರಿಯಾಗಿದ್ದರು. ಅಲ್ಲಿಂದ ತಮಿಳುನಾಡಿಗೆ ತೆರಳಿದ್ದರು.

ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಪ್ರತ್ಯೇಕ ತಂಡವನ್ನು ರಚಿಸಿದ್ದರು. ಕೇರಳ, ತಮಿಳುನಾಡು, ಮುಂಬೈ ಹಾಗೂ ಉತ್ತರ ಭಾರತದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಲಾಗಿತ್ತು. ಅಲ್ಲದೆ ಸ್ಥಳೀಯ ಶಂಕಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.