ಮಂಗಳೂರು- ಗೋವಾ ವಂದೇ ಭಾರತ್ ರೈಲು ಪ್ರಯೋಗಿಕ ಸಂಚಾರ ಯಶಸ್ವಿ

| Published : Dec 27 2023, 01:31 AM IST

ಮಂಗಳೂರು- ಗೋವಾ ವಂದೇ ಭಾರತ್ ರೈಲು ಪ್ರಯೋಗಿಕ ಸಂಚಾರ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಮಂಗಳವಾರ ಪ್ರಾಯೋಗಿಕ ಪ್ರಯಾಣವನ್ನು ಯಶಸ್ವಿಯಾಗಿ ನಡೆಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರದ ಫೋಟೊ, ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರೈಲು ಯಾತ್ರಿಗಳು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುನಿರೀಕ್ಷಿತ ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಮಂಗಳವಾರ ಪ್ರಾಯೋಗಿಕ ಪ್ರಯಾಣವನ್ನು ಯಶಸ್ವಿಯಾಗಿ ನಡೆಸಿದೆ.ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟ ರೈಲು ಗೋವಾದ ಮಡ್ಗಾಂವ್‌ಗೆ 12.23ಕ್ಕೆ ತಲುಪಿದೆ. 12.53ಕ್ಕೆ ಮಡ್ಗಾಂವ್‌ನಿಂದ ಮರು ಪ್ರಯಾಣ ಆರಂಭಿಸಿ ಮಂಗಳೂರು ಸೆಂಟ್ರಲ್‌ಗೆ ಸಂಜೆ 4.45ಕ್ಕೆ ತಲುಪಿದೆ. ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿತ್ತು.ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರದ ಫೋಟೊ, ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರೈಲು ಯಾತ್ರಿಗಳು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.ಪ್ರಾಯೋಗಿಕ ಸಂಚಾರದ ರೈಲು ಸೋಮವಾರವೇ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬಂದು ತಂಗಿತ್ತು. ಮಂಗಳವಾರ ಬೆಳಗ್ಗೆ ರೈಲು ಸಂಚಾರ ಆರಂಭಿಸುವ ಸಂದರ್ಭ ಸಂಸದ ನಳಿನ್‌ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಕಾರ್ಪೋರೇಟರ್ ಭರತ್ ಕುಮಾರ್ ಹಾಗೂ ರೈಲ್ವೆ ಅಧಿಕಾರಿಗಳು ಇದ್ದರು. ನಿಗದಿತ ಸಮಯಕ್ಕೆ ಯಾವುದೇ ಸಮಸ್ಯೆಗಳಿಲ್ಲದೆ ರೈಲು ಗೋವಾ ತಲುಪಿರುವ ಮಾಹಿತಿ ಲಭ್ಯವಾಗಿದೆ.

ಡಿ.30ರಿಂದ ಈ ಮಾರ್ಗದಲ್ಲಿ ವಂದೇ ಭಾರತ್ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವ್ಯವಸ್ಥೆಯ ಮೂಲಕ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ. ಈ ಸಂದರ್ಭ ಮಂಗಳೂರು ಸೆಂಟ್ರಲ್ ನಿಲ್ದಾಣದ 4 ಮತ್ತು 5 ನೇ ಫ್ಲಾಟ್‌ಫಾರ್ಮ್‌ನ್ನು ಕೂಡ ಪ್ರಧಾನಿಯವರು ಉದ್ಘಾಟಿಸಲಿದ್ದಾರೆ.ಮಂಗಳೂರು- ಮಡ್ಗಾಂವ್ ನಡುವಿನ ವಂದೇ ಭಾರತ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ 6 ದಿನವೂ ಸಂಚಾರ ನಡೆಸಲಿದೆ.