ಮಂಗಳೂರು : ಕರಾವಳಿ ಕರ್ನಾಟಕದ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಸುಮಾರು 23 ವರ್ಷಗಳಿಂದ ನಡೆಯುತ್ತಿದ್ದ ಮಂಗಳೂರು ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಕೊನೆಗೂ ಕೇಂದ್ರ ರೈಲ್ವೆ ಮಂಡಳಿಯ ಮಟ್ಟದಲ್ಲಿ ಹಸಿರು ನಿಶಾನೆ ದೊರೆತಿದೆ. ಕೇರಳದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಆದೇಶ ಹೊರಬಿದ್ದಿದೆ. ಕೊನೆಗೂ ಕರಾವಳಿಯ ದೀರ್ಘ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.
ಮಂಗಳೂರು : ಕರಾವಳಿ ಕರ್ನಾಟಕದ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಸುಮಾರು 23 ವರ್ಷಗಳಿಂದ ನಡೆಯುತ್ತಿದ್ದ ಮಂಗಳೂರು ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಕೊನೆಗೂ ಕೇಂದ್ರ ರೈಲ್ವೆ ಮಂಡಳಿಯ ಮಟ್ಟದಲ್ಲಿ ಹಸಿರು ನಿಶಾನೆ ದೊರೆತಿದೆ. ಕೇರಳದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಆದೇಶ ಹೊರಬಿದ್ದಿದೆ. ಕೊನೆಗೂ ಕರಾವಳಿಯ ದೀರ್ಘ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಇದು ಕೇವಲ ರೈಲ್ವೆ ಆಡಳಿತದ ಗಡಿ ಬದಲಾವಣೆಯಲ್ಲ. ಮಂಗಳೂರಿನ ರೈಲ್ವೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಅಡ್ಡಿಯಾಗಿದ್ದ ಆಡಳಿತಾತ್ಮಕ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ಮಹತ್ವದ ಹೆಜ್ಜೆ ಎಂದೇ ಇದನ್ನು ಪರಿಗಣಿಸಲಾಗುತ್ತಿದೆ.
2003ರಲ್ಲಿ ಮೊಳಕೆಯೊಡೆದ ಬೇಡಿಕೆ: ನೈಋತ್ಯ ರೈಲ್ವೆ ವಲಯ 2003ರಲ್ಲಿ ಅಸ್ತಿತ್ವಕ್ಕೆ ಬಂದಾಗ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳು ಅದರ ವ್ಯಾಪ್ತಿಗೆ ಬಂದವು. ಆದರೆ ಮಂಗಳೂರಿನ ರೈಲ್ವೆ ವ್ಯವಸ್ಥೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಲ್ಲೇ ಮುಂದುವರಿಯಿತು. ಪರಿಣಾಮವಾಗಿ ಕರ್ನಾಟಕದ ಪ್ರಮುಖ ಕರಾವಳಿ ನಗರವಾಗಿರುವ ಮಂಗಳೂರು, ತನ್ನ ರಾಜ್ಯದ ಒಳನಾಡಿನೊಂದಿಗೆ ರೈಲ್ವೆ ಸಂಪರ್ಕ ಹೊಂದಿದ್ದರೂ ಆಡಳಿತಾತ್ಮಕವಾಗಿ ಕೇರಳದ ಪಾಲಕ್ಕಾಡ್ ವಿಭಾಗದ ಅಧೀನದಲ್ಲೇ ಉಳಿಯಿತು.ಅಲ್ಲಿಂದಲೇ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈಋತ್ಯ ರೈಲ್ವೆಗೆ ಸೇರಿಸುವ ಬೇಡಿಕೆ ಬಲ ಪಡೆಯಿತು. ಆರಂಭದಲ್ಲಿ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸಬೇಕು ಎಂಬ ಬೇಡಿಕೆ ಇತ್ತು. ನಂತರ ಆಡಳಿತಾತ್ಮಕವಾಗಿ ತಕ್ಷಣ ಸಾಧ್ಯವಾಗಬಹುದಾದ ಮಾರ್ಗವಾಗಿ ಮಂಗಳೂರು ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಬೇಡಿಕೆ ಮುನ್ನೆಲೆಗೆ ಬಂತು.ಪ್ರಸ್ತಾವನೆ, ಪತ್ರ ವ್ಯವಹಾರ: 2003ರಲ್ಲೇ ಮಂಗಳೂರು ಪ್ರದೇಶವನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಪ್ರಸ್ತಾವನೆಗೆ ರೈಲ್ವೆ ಮಂಡಳಿಯಲ್ಲಿ ಅನುಮೋದನೆ ದೊರೆತಿತ್ತು. ಆದರೆ ಮಂಗಳೂರು-ಹಾಸನ ರೈಲು ಮಾರ್ಗದ ಗೇಜ್ ಪರಿವರ್ತನೆ ಸೇರಿದಂತೆ ಕೆಲವು ಕಾಮಗಾರಿಗಳು ಪೂರ್ಣಗೊಳ್ಳಬೇಕಿದ್ದ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ಹೊರಬರಲಿಲ್ಲ. ಬ್ರಾಡ್‌ಗೇಜ್ ಕಾಮಗಾರಿ ಪೂರ್ಣಗೊಂಡ ಬಳಿಕವೂ ನಿರೀಕ್ಷಿತ ಆಡಳಿತಾತ್ಮಕ ವರ್ಗಾವಣೆ ನಡೆಯದಿರುವುದು ಅಸಮಾಧಾನಕ್ಕೆ ಕಾರಣವಾಯಿತು. 2014ರಲ್ಲಿಯೂ ನೈಋತ್ಯ ರೈಲ್ವೆಯ ಅಧಿಕಾರಿಗಳಿಂದ ಈ ಹಳೆಯ ಪ್ರಸ್ತಾವನೆಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯ ಗಮನ ಸೆಳೆಯಲಾಗಿತ್ತು.
ನಿರಂತರ ರಾಜಕೀಯ ಒತ್ತಡ:ಮಂಗಳೂರು ರೈಲ್ವೆ ವಿಭಾಗದ ಬೇಡಿಕೆಯನ್ನು ವಿವಿಧ ಹಂತಗಳಲ್ಲಿ ದ.ಕ. ಜನಪ್ರತಿನಿಧಿಗಳು ಕೇಂದ್ರದ ಗಮನಕ್ಕೆ ತಂದರು. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವು ಮುಖಂಡರು ಪ್ರತ್ಯೇಕ ರೈಲ್ವೆ ವಿಭಾಗ ಅಥವಾ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಗೆ ಸೇರಿಸುವಂತೆ ಒತ್ತಾಯಿಸಿದರು.
ನಂತರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೂಡ ಸಂಸತ್ ಹಾಗೂ ರೈಲ್ವೆ ಸಚಿವಾಲಯದ ಮುಂದೆ ಬೇಡಿಕೆ ಮುಂದಿಟ್ಟರು. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಹಾಗೂ ಸುತ್ತಮುತ್ತಲಿನ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಆಡಳಿತಾತ್ಮಕ ಪುನರ್ ವ್ಯವಸ್ಥೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದರು.2019ರಲ್ಲಿ ಮತ್ತೆ ಮುನ್ನೆಲೆಗೆ:2019ರಲ್ಲಿ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಗೆ ವರ್ಗಾಯಿಸುವ ಕುರಿತು ಹಿಂದೆ ರೈಲ್ವೆ ಮಂಡಳಿ ತೆಗೆದುಕೊಂಡಿದ್ದ ನಿರ್ಧಾರದ ವಿಚಾರ ಮತ್ತೆ ಮುನ್ನೆಲೆಗೆ ಬಂದಿತು. ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದರೂ ಗೆಜೆಟ್ ಅಧಿಸೂಚನೆ ಮಾತ್ರ ಹೊರಬಂದಿರಲಿಲ್ಲ ಎಂಬುದು ಹೋರಾಟಕ್ಕೆ ಹೊಸ ಚೈತನ್ಯ ನೀಡಿತು.
ಆದರೆ 2021ರಲ್ಲಿ ಪರಿಸ್ಥಿತಿ ಮತ್ತೆ ಬದಲಾಯಿತು. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಒಳಗೊಂಡ ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯಲ್ಲೇ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಹೋರಾಟಗಾರರಿಗೆ ನಿರಾಸೆಯಾಯಿತು.2023ರಲ್ಲಿ ‘ಪ್ರಸ್ತಾವನೆಯೇ ಇಲ್ಲ’ ಎಂದಿದ್ದ ಕೇಂದ್ರ!: 2023ರಲ್ಲಿ ರಾಜ್ಯಸಭೆಯಲ್ಲಿ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಗೆ ವರ್ಗಾಯಿಸುವ ಕುರಿತು ಸಂಸದರು ಪ್ರಶ್ನೆ ಕೇಳಿದಾಗ, ರೈಲ್ವೆ ಸಚಿವಾಲಯದ ಉತ್ತರದಲ್ಲಿ ತಕ್ಷಣದ ವರ್ಗಾವಣೆ ಪ್ರಸ್ತಾವನೆ ಇಲ್ಲ ಎಂಬ ನಿಲುವು ವ್ಯಕ್ತವಾಗಿತ್ತು. ಇದರಿಂದ ದಶಕಗಳ ಬೇಡಿಕೆ ಮತ್ತೆ ಅನಿಶ್ಚಿತತೆಗೆ ಸಿಲುಕಿತ್ತು.2024ರ ಜುಲೈನಲ್ಲಿ ಪಾಲಕ್ಕಾಡ್ ವಿಭಾಗದ ವಿಭಜನೆ ಹಾಗೂ ಮಂಗಳೂರು ಪ್ರದೇಶ ವರ್ಗಾವಣೆ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದಾಗ ದಕ್ಷಿಣ ರೈಲ್ವೆ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿತ್ತು. ಮಂಗಳೂರು ಪ್ರದೇಶವನ್ನು ಹೊಸ ವಲಯ ಅಥವಾ ವಿಭಾಗಕ್ಕೆ ವರ್ಗಾಯಿಸುವ ಕುರಿತು ಯಾವುದೇ ಚರ್ಚೆ, ಪ್ರಸ್ತಾವನೆ ಅಥವಾ ಯೋಜನೆ ಇಲ್ಲ ಎಂದು ಪಾಲಕ್ಕಾಡ್ ವಿಭಾಗದ ಡಿಆರ್‌ಎಂ ಹೇಳಿದ್ದರು. ಜನಾಂದೋಲನಕ್ಕೆ ಹೊಸ ವೇಗ: ಇದರಿಂದ ಹೋರಾಟ ನಿಲ್ಲಲಿಲ್ಲ. ದಕ್ಷಿಣ ಕನ್ನಡ ರೈಲು ಪ್ರಯಾಣಿಕರ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಜನಜಾಗೃತಿ, ಸಹಿ ಸಂಗ್ರಹ ಮತ್ತು ಕೇಂದ್ರದ ಮೇಲೆ ಒತ್ತಡ ಹೇರುವ ಚಟುವಟಿಕೆಗಳನ್ನು ಮುಂದುವರಿಸಿದವು. 2024ರಲ್ಲಿ ಮಂಗಳೂರು ರೈಲ್ವೆ ಅಭಿವೃದ್ಧಿ ಮತ್ತು ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆಗೆ ಸಾವಿರಾರು ಜನರಿಂದ ಬೆಂಬಲ ಪಡೆಯುವ ಅಭಿಯಾನವೂ ನಡೆಯಿತು.ಪ್ರಮುಖವಾಗಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್‌ಗಳನ್ನು ಕೇವಲ ನಿಲ್ದಾಣಗಳಾಗಿ ನೋಡುವ ಬದಲು, ಕರಾವಳಿಯ ಪ್ರಮುಖ ರೈಲ್ವೆ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬೇಕು ಎಂಬ ಕೂಗು ಬಲವಾಯಿತು. 2025ರ ಮಾರ್ಚ್ 26ರಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಮಂಗಳೂರು ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸುವ ಕುರಿತು ನೇರವಾಗಿ ಪ್ರಶ್ನಿಸಿದರು.
ಮೂರು ರೈಲ್ವೆ ಆಡಳಿತಗಳ ಗೊಂದಲ!ಮಂಗಳೂರು ರೈಲ್ವೆ ಸಮಸ್ಯೆಯ ಪ್ರಮುಖ ಕಾರಣವೇ ಮೂರು ಆಡಳಿತ ವ್ಯವಸ್ಥೆಗಳ ವಿಭಜನೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಸೇರಿದಂತೆ ಪ್ರಮುಖ ಪ್ರದೇಶಗಳು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದರೆ, ಮಂಗಳೂರು-ಹಾಸನ-ಬೆಂಗಳೂರು ಮಾರ್ಗದ ಪ್ರಮುಖ ಭಾಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ಸಂಪರ್ಕ ಹೊಂದಿದೆ. ಮತ್ತೊಂದೆಡೆ ತೊಕ್ಕೂರು ಭಾಗ ಕೊಂಕಣ ರೈಲ್ವೆಯೊಂದಿಗೆ ಸಂಬಂಧ ಹೊಂದಿದೆ.ಒಂದೇ ನಗರದ ರೈಲ್ವೆ ವ್ಯವಸ್ಥೆ ಹೀಗೆ ವಿಭಜನೆಯಾಗಿರುವುದರಿಂದ ಹೊಸ ರೈಲು ಸೇವೆ, ವೇಳಾಪಟ್ಟಿ, ನಿರ್ವಹಣೆ, ಮೂಲಸೌಕರ್ಯ ಕಾಮಗಾರಿ ಹಾಗೂ ಮಾರ್ಗ ಅಭಿವೃದ್ಧಿಯಲ್ಲಿ ವಿವಿಧ ಆಡಳಿತಗಳ ನಡುವೆ ಸಮನ್ವಯದ ಅಗತ್ಯ ಎದುರಾಗುತ್ತಿತ್ತು ಎಂಬುದು ಹೋರಾಟಗಾರರ ಪ್ರಮುಖ ವಾದ.