ಮಂಗಳೂರು ವಿವಿ ಅನಗತ್ಯ ಹೊರಗುತ್ತಿಗೆ ಸಿಬ್ಬಂದಿಗೆ ಶೀಘ್ರ ಖೊಕ್‌?

| Published : Oct 23 2023, 12:16 AM IST

ಮಂಗಳೂರು ವಿವಿ ಅನಗತ್ಯ ಹೊರಗುತ್ತಿಗೆ ಸಿಬ್ಬಂದಿಗೆ ಶೀಘ್ರ ಖೊಕ್‌?
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯ
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 410 ಮಂದಿ ಹೊರಗುತ್ತಿಗೆ ಸಿಬ್ಬಂದಿ ಪೈಕಿ ಅನಗತ್ಯ ನೆಲೆಯಲ್ಲಿ ಕೆಲವು ಮಂದಿ ಸಿಬ್ಬಂದಿಯ ಕೆಲಸಕ್ಕೆ ಶೀಘ್ರವೇ ಕತ್ತರಿ ಬೀಳಲಿದೆ. ವಿವಿಯಲ್ಲಿ ಅನಗತ್ಯವಾಗಿ ಇಷ್ಟೊಂದು ಮಂದಿ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆದುಕೊಂಡಿದ್ದು, ಇದರ ಪಾವತಿಯ ವೆಚ್ಚ ಅಧಿಕವಾಗುತ್ತಿದೆ ಎಂಬ ಲೆಕ್ಕ ಪರಿಶೋಧನಾ ವರದಿಯ ಆಕ್ಷೇಪ ಹಾಗೂ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಹೊರಗುತ್ತಿಗೆಯಲ್ಲಿ ನೇಮಕ ಮಾಡಿರುವುದು ಈಗ ವಿವಿ ಆಡಳಿತಕ್ಕೆ ಬಿಸಿ ತುಪ್ಪವಾದರೆ, ಹೊರಗುತ್ತಿಗೆ ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಶೇ.90 ಹೊರಗುತ್ತಿಗೆ ಸಿಬ್ಬಂದಿ: 10-15 ವರ್ಷಗಳ ಹಿಂದೆ ಮಂಗಳೂರು ವಿವಿಯಲ್ಲಿ ಆಡಳಿತಾತ್ಮಕ ಕಾರಣಗಳಿಗೆ ಹೊರಗುತ್ತಿಗೆಯ ಸಿಬ್ಬಂದಿ ನೇಮಕ ಶುರು ಮಾಡಲಾಗಿತ್ತು. ಆಗ ಸಣ್ಣ ಪ್ರಮಾಣದಲ್ಲಿ ನೇಮಕ ಆರಂಭವಾಗಿದ್ದು, ಬಳಿಕ ವಿವಿಯಲ್ಲಿ ಹೊಸ ಕೋರ್ಸ್‌ಗಳು, ವಿಭಾಗಗಳ ವಿಸ್ತರಣೆಯಾದಂತೆ ಸಿಬ್ಬಂದಿಯ ಅವಶ್ಯಕತೆ ತಲೆದೋರಿತ್ತು. ಹೀಗಾಗಿ ಹಂತ ಹಂತವಾಗಿ ಹೊರಗುತ್ತಿಗೆ ಸಿಬ್ಬಂದಿ ಸಂಖ್ಯೆ ಹೆಚ್ಚುತ್ತಾ ಈಗ 410ಕ್ಕೆ ತಲುಪಿದೆ. ವಿವಿಯಲ್ಲಿ ಶೇ.10ರಷ್ಟು ಕಾಯಂ ಸಿಬ್ಬಂದಿ ಇದ್ದರೆ, ಶೇ.90ರಷ್ಟು ಇರುವುದೇ ಹೊರಗುತ್ತಿಗೆ ಸಿಬ್ಬಂದಿ. ಪ್ರತಿ ವರ್ಷ ಕಾಯಂ ಸಿಬ್ಬಂದಿ ನಿವೃತ್ತರಾಗುತ್ತಿದ್ದರೂ ಹೊಸದಾಗಿ ನೇಮಕ ಆಗುತ್ತಿಲ್ಲ, ಹಾಗಾಗಿ ವಿವಿ ಆಡಳಿತಕ್ಕೆ ಹೊರಗುತ್ತಿಗೆ ಸಿಬ್ಬಂದಿ ನೇಮಕ ಅನಿವಾರ್ಯವಾಗಿದೆ. ಸಮಸ್ಯೆ ಏನು?: ಹೊರಗುತ್ತಿಗೆ ಸಿಬ್ಬಂದಿ ನೇಮಕದಿಂದ ವಿವಿ ಆಡಳಿತ ವೆಚ್ಚ ಹೆಚ್ಚಾಗುತ್ತಿದೆ. ಪ್ರಸಕ್ತ ಇರುವ 26 ವಿಭಾಗಗಳಿಗೆ ಹೋಲಿಸಿದರೆ, ಇಷ್ಟೊಂದು ಸಿಬ್ಬಂದಿ ಅನಗತ್ಯ. ಅಲ್ಲದೆ ನಮ್ಮಲ್ಲಿಂದ ಹೊರಗುತ್ತಿಗೆ ನೇಮಕಕ್ಕೆ ಅನುಮತಿಯನ್ನು ಪಡೆದಿಲ್ಲ. ಹಾಗಾಗಿ ಕೂಡಲೇ ಅವರನ್ನೆಲ್ಲ ಮನೆಗೆ ಕಳುಹಿಸಿ ಎನ್ನುವುದು ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಆದೇಶ. ಇದೇ ವೇಳೆ ಲೆಕ್ಕಪರಿಶೋಧನಾ ವರದಿಯೂ ಇಷ್ಟೊಂದು ಸಿಬ್ಬಂದಿಯ ಅವಶ್ಯಕತೆ ಹಾಗೂ ವೆಚ್ಚದ ಬಗ್ಗೆ ಆಕ್ಷೇಪ ಎತ್ತಿದೆ. ಆದರೆ ಈಗಿನ ಸನ್ನಿವೇಶದಲ್ಲಿ ವಿವಿಯ ಕಾರ್ಯಭಾರ ಹೆಚ್ಚಾಗಿರುವುದರಿಂದ ಇಷ್ಟು ಸಿಬ್ಬಂದಿಯ ಅಗತ್ಯ ಇದೆ ಎಂಬುದನ್ನು ಮನವರಿಕೆ ಮಾಡುವಲ್ಲಿ ವಿವಿ ಆಡಳಿತ ಸೋತಿದೆ. 3 ತಿಂಗಳಿಗೆ ಮಾತ್ರ ನೇಮಕ: ಸರ್ಕಾರದ ಖಡಕ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ಅ.12ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯನ್ನು ಒಮ್ಮೆ ಸೇವೆಯಿಂದ ಬಿಡುಗಡೆಗೊಳಿಸಿ, ಮರು ಸೇವೆಗೆ ಮೂರು ತಿಂಗಳ ಮಟ್ಟಿಗೆ ನೇಮಕಗೊಳಿಸುವಂತೆ ನಿರ್ಣಯಿಸಲಾಗಿದೆ. ಇದು ಮಾಮೂಲು ಪ್ರಕ್ರಿಯೆಯಾಗಿದ್ದು, ಅದರಂತೆ ಅ.16ರಂದು ಈ ಎಲ್ಲ 410 ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿ, ಅ.18ರಿಂದ ಅನ್ವಯವಾಗುವಂತೆ ಮೂರು ತಿಂಗಳ ಮಟ್ಟಿಗೆ ಇವರ ಸೇವೆ ಬಳಸಿಕೊಳ್ಳುವಂತೆ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಅನಗತ್ಯ ಸಿಬ್ಬಂದಿಗೆ ಖೊಕ್‌: ಪ್ರಸಕ್ತ ಮಂಗಳೂರು ವಿವಿಯಿಂದ ಬೇರ್ಪಟ್ಟು ಕೊಡಗು ವಿವಿ ಪ್ರತ್ಯೇಕ ರಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಅಡಿಯಲ್ಲಿ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಕೈಬಿಟ್ಟು, ಅಲ್ಲಿಯೇ ಮುಂದುವರಿಯುವಂತೆ ಸೂಚಿಸಲು ತೀರ್ಮಾನಿಸಲಾಗಿದೆ. ಮಾತ್ರವಲ್ಲ ವಿವಿಯ ಅವಶ್ಯಕ ವಿಭಾಗಗಳಿಗೆ ಮಾತ್ರ ಹೊರಗುತ್ತಿಗೆ ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಸರ್ಕಾರದ ಆದೇಶದಂತೆ ಹೊರಗುತ್ತಿಗೆ ಸಿಬ್ಬಂದಿ ನೇಮಕ ವಿಚಾರವನ್ನು ಹಂತ ಹಂತವಾಗಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ರಾಜು, ಕುಲಸಚಿವರು, ಮಂಗಳೂರು ವಿವಿ