ಹಾಪ್ ಕಾಮ್ಸ್‌ನಿಂದ ನಗರದಲ್ಲಿ ಮಾವು-ಹಲಸು ಹಣ್ಣಿನ ಮೇಳ

| Published : May 18 2025, 01:53 AM IST

ಸಾರಾಂಶ

ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಕಾಲ ನಗರದಲ್ಲಿ ಮಾವು ಮತ್ತು ಹಲಸಿನ ಮೇಳ ಆಯೋಜಿಸಿದ್ದು, ಸುಮಾರು 10 ಬಗೆಯ ಮಾವಿನ ಹಣ್ಣು ಮತ್ತು ವಿಶೇಷ ಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಶಿವಮೊಗ್ಗ ಹಾಪ್ ಕಾಮ್ಸ್ ಅಧ್ಯಕ್ಷ ಆರ್. ವಿಜಯ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಕಾಲ ನಗರದಲ್ಲಿ ಮಾವು ಮತ್ತು ಹಲಸಿನ ಮೇಳ ಆಯೋಜಿಸಿದ್ದು, ಸುಮಾರು 10 ಬಗೆಯ ಮಾವಿನ ಹಣ್ಣು ಮತ್ತು ವಿಶೇಷ ಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಶಿವಮೊಗ್ಗ ಹಾಪ್ ಕಾಮ್ಸ್ ಅಧ್ಯಕ್ಷ ಆರ್. ವಿಜಯ್ ಕುಮಾರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರೈತರು ಋತುಮಾನಕ್ಕನುಗುಣವಾಗಿ ಬೆಳೆಯುವ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ದರ ಒದಗಿಸಿಕೊಡುವ ಉದ್ದೇಶದೊಂದಿಗೆ ಈ ಮೇಳವನ್ನು ವಿನೋಬನಗರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ( ಎಪಿಎಂಸಿ) ದಲ್ಲಿ ಆಯೋಜಿಸಿದ್ದು, ಮೇ.24 ರಂದು ಬೆಳಗ್ಗೆ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕೆ 20 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಯ ರೈತರು ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ತರಲಿದ್ದಾರೆ. ರಸಪೂರಿ, ಮಲಗೋಬ, ಸಿಂದೂಲ, ರತ್ನಗಿರಿ ಸೇರಿ ಹತ್ತು ತಳಿಯ ಮಾವಿನ ಹಣ್ಣುಗಳು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಲಿವೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಸಕ್ಕರಾಯಪಟ್ಟಣದ ವಿಶೇಷ ತಳಿಯ ಹಲಸಿನ ಹಣ್ಣುಗಳು ಮೇಳದ ಆಕರ್ಷಣೆ ಆಗಲಿವೆ ಎಂದರು.

ಸೊರಬದ ರೈತರು ಅನಾನಸ್ ತರುವುದಾಗಿ ಹೇಳಿದ್ದಾರೆ. ಕಲ್ಲಂಗಡಿ, ಖರ್ಬೂಜ ಸೇರಿದಂತೆ ರೈತರು ಬೆಳೆದ ನಾನಾ ತರಹದ ಹಣ್ಣುಗಳು ಕೂಡ ಮೇಳಕ್ಕೆ ಬರುತ್ತಿವೆ. ಒಟ್ಟಿನಲ್ಲಿ ರೈತರು ಬೆಳೆದ ಹಣ್ಣುಗಳು ನೇರವಾಗಿ ಗ್ರಾಹಕರಿಗೆ ಕೈಗೆಟುವ ಬೆಲೆಯಲ್ಲಿ ಲಭ್ಯವಾಗಬೇಕು, ರೈತರಿಗೂ ಒಳ್ಳೆಯ ಬೆಲೆ ಸಿಗಬೇಕೆನ್ನುವ ಉದ್ದೇಶ ಈ ಮೇಳಕ್ಕಿದೆ ಎಂದರು.

ತೋಟಗಾರಿಕಾ ಇಲಾಖೆ ಮಾರ್ಗದರ್ಶನ ಹಾಗೂ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾ ಮಂಡಳ ಸಹಯೋಗದೊಂದಿಗೆ ಜಿಲ್ಲಾ ಹಾಪ್ ಕಾಮ್ಸ್ ನಿಂದ ಈ ಮೇಳ ಆಯೋಜಿಸಲಾಗಿದೆ. ರೈತ ಬಾಂಧವರು ಮತ್ತು ಗ್ರಾಹಕ ಬಂಧುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಹಾಪ್‌ಕಾಮ್ಸ್ ವತಿಯಿಂದ ದ್ರಾಕ್ಷಿ ವೈನ್ ಮೇಳ ನಡೆಸುವ ಬಗ್ಗೆಯೂ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಅದಕ್ಕೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಶಿವಮೊಗ್ಗ ಹಾಪ್ ಕಾಮ್ಸ್ ಉಪಾಧ್ಯಕ್ಷ ನಾಗೇಶ್ ನಾಯ್ಕ್, ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್, ನಿರ್ದೇಶಕರಾದ ಉಂಬ್ಲೇಬೈಲು ಮೋಹನ್, ಮುನಿಸ್ವಾಮಿ, ಮ್ಯಾನೇಜರ್ ಕಾಳರಾಜ್ ಇದ್ದರು.

....................

ಜಿಲ್ಲೆಯ ರೈತರು ಋತುಮಾನಕ್ಕನುಗುಣವಾಗಿ ಬೆಳೆಯುವ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ದರ ಒದಗಿಸಿಕೊಡುವ ಉದ್ದೇಶದೊಂದಿಗೆ ಎರಡು ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ಮಾವು ಮತ್ತು ಹಲಸಿನ ಹಣ್ಣಿನ ಮೇಳ ಆಯೋಜಿಸಲಾಗಿದೆ. ತೋಟಗಾರಿಕಾ ಇಲಾಖೆ ಮಾರ್ಗದರ್ಶನ ಹಾಗೂ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾ ಮಂಡಳ ಸಹಯೋಗ ಇದಕ್ಕಿದೆ. ರೈತರು ಮತ್ತು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.

- ಆರ್. ವಿಜಯ ಕುಮಾರ್ ಹಾಪ್‍ಕಾಮ್ಸ್ ಅಧ್ಯಕ್ಷರು.