ಸಂಸ್ಕರಣಾ ಘಟಕವನ್ನು ಮಾವು ಬೆಳೆಗೆ ಮಾತ್ರ ಸೀಮಿತ ಮಾಡದೆ ತೆಂಗು, ಬೇಬಿ ಕಾರ್ನ್ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೂ ವಿಸ್ತಾರ ಮಾಡುವ ಯೋಜನೆ ರೂಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ತಾಲೂಕಿನ ಬೈರಾಪಟ್ಟಣ ಬಳಿ ನಿರ್ಮಾಣವಾಗಿರುವ ಮಾವು ಸಂಸ್ಕರಣಾ ಘಟಕವನ್ನು ಶೀಘ್ರ ಉದ್ಘಾಟನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು.ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಿಂದ ಬೈರಾಪಟ್ಟಣ ಬಳಿ ಮಾವು ಸಂಸ್ಕರಣಾ ಘಟಕ ನಿರ್ಮಾಣವಾಗಿ ಎರಡು ವರ್ಷ ಕಳೆದಿದ್ದರೂ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಮಾವು ಸಂಸ್ಕರಣಾ ಘಟಕ ನಿರ್ಮಾಣವಾಗಿ ಎರಡು ವರ್ಷ ಕಳೆದಿದೆ. ಮೊದಲು ಮಾವು ಬೆಳೆಗಾಗಿ ಇದನ್ನು ನಿರ್ಮಾಣ ಮಾಡಲಾಗಿತ್ತು. ಈಗ ಬಹು ತೋಟಗಾರಿಕೆ ಉತ್ಪನ್ನಗಳ ಕೋಯ್ಲೋತ್ತರ ನಿರ್ವಹಣಾ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿದೆ. ರೈತ ಬೆಳೆದ ತೋಟಗಾರಿಕೆ ಬೆಳೆಗಳನ್ನು ಬಹು ದಿನಗಳವರೆಗೆ ಹಾಳಾಗದಂತೆ ಸಂಸ್ಕರಣೆ ಮಾಡಿ ವಿದೇಶಗಳಿಗೆ ರಫ್ತು ಮಾಡುವ ವ್ಯವಸ್ಥೆ ಇಲ್ಲಿದೆ. ಘಟಕ ಉದ್ಘಾಟನೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಹಾಜರಿದ್ದ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಉಪ ನಿರ್ದೇಶಕಿ ಅಸ್ಮಾ ನಾಜ್ ಮಾತನಾಡಿ, ಈಗಾಗಲೇ ಘಟಕವನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಈ ವರ್ಷದಿಂದಲೇ ಘಟಕ ಕಾರ್ಯಾರಂಭ ಮಾಡಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ವೇಳೆಗಾಗಲೇ ಘಟಕ ಉದ್ಘಾಟನೆ ಮಾಡುವ ಯೋಜನೆ ರೂಪಿಸಲಾಗಿತ್ತು. ಉದ್ಘಾಟನೆಗೆ ಸಚಿವರನ್ನು ಆಹ್ವಾನಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ಎದುರಾದ ಕಾರಣ ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಸಂಸ್ಕರಣಾ ಘಟಕವನ್ನು ಮಾವು ಬೆಳೆಗೆ ಮಾತ್ರ ಸೀಮಿತ ಮಾಡದೆ ತೆಂಗು, ಬೇಬಿ ಕಾರ್ನ್ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೂ ವಿಸ್ತಾರ ಮಾಡುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಟ್ಟಡವು ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿರುವ ಕಾರಣ ಸಚಿವರ ಲಭ್ಯತೆಯನ್ನು ಆಧರಿಸಿ ಇದೇ ತಿಂಗಳ ಅಂತ್ಯದ ವೇಳೆಗೆ ಘಟಕ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಂಕರ್, ಲೋಕೋಪಯೋಗಿ ಇಲಾಖೆ ಎಇ ಮಲ್ಲಿಕಾರ್ಜುನ್, ಸಂಸ್ಕರಣಾ ಘಟಕದ ಗುತ್ತಿಗೆದಾರ ಪ್ರಸಾದ್, ಸ್ಥಳೀಯ ಮುಖಂಡರಾದ ಪ್ರಮೋದ್, ಚೇತನ್, ಇತರರು ಹಾಜರಿದ್ದರು.
