ಈ ಬಾರಿ ಇಳುವರಿಯೂ ಇಲ್ಲ, ಉತ್ತಮ ಬೆಲೆಯೂ ಇಲ್ಲದೇ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮಾವು ಹಂಗಾಮಿನ ಶುರುವಾತಿನಲ್ಲಿ ಮಾವಿಗೆ ಬೇಡಿಕೆ ಎನ್ನಿಸಿದರೂ ಎರಡ್ಮೂರು ದಿನಗಳ ಅಂತರದಲ್ಲಿ ಮಾವಿಗೆ ತೀವ್ರ ಬೆಲೆ ಕುಸಿತ ಕಂಡಿದೆ.
ಬಸವರಾಜ ಹಿರೇಮಠ
ಧಾರವಾಡ: ಈ ಬಾರಿ ಇಳುವರಿಯೂ ಇಲ್ಲ, ಉತ್ತಮ ಬೆಲೆಯೂ ಇಲ್ಲದೇ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮಾವು ಹಂಗಾಮಿನ ಶುರುವಾತಿನಲ್ಲಿ ಮಾವಿಗೆ ಬೇಡಿಕೆ ಎನ್ನಿಸಿದರೂ ಎರಡ್ಮೂರು ದಿನಗಳ ಅಂತರದಲ್ಲಿ ಮಾವಿಗೆ ತೀವ್ರ ಬೆಲೆ ಕುಸಿತ ಕಂಡಿದೆ.ಮಧ್ಯಪ್ರಾಚ್ಯ ಯುದ್ಧದ ಕರಿನೆರಳು ಮಾವು ಕಾಯಿ ಬೆಳೆಗಾರರ ಮೇಲೆ ಬಿದ್ದಿದ್ದು, ಕೊಲ್ಲಿ ದೇಶಗಳಿಗೆ ಗುಣಮಟ್ಟದ ಮಾವು ಹಾಗೂ ಅದರ ಉತ್ಪನ್ನಗಳು ರಫ್ತಾಗದಿರುವುದೇ ಮಾವಿನ ಕಾಯಿಯ ಬೆಲೆ ಕುಸಿಯಲು ಪ್ರಮುಖ ಕಾರಣ ಎನ್ನಲಾಗಿದೆ. ಹವಾಮಾನ ವೈಪರೀತ್ಯದಿಂದ ಮಾವಿನ ಮೇಲ್ಭಾಗದಲ್ಲಿ ಕಪ್ಪುಚುಕ್ಕೆ ಬಿದ್ದಿದ್ದು, ರಫ್ತು ಮಾಡಲು ರೈತರು, ವ್ಯಾಪಾರಸ್ಥರು ಹರಸಾಹಸ ಪಡಬೇಕಾಗಿದೆ.
ಬೆಲೆ ಕುಸಿತಈ ಬಾರಿ ಟ್ರೇ ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಕೆಜಿ ಮಾವಿನ ಕಾಯಿ ₹100 ವರೆಗೆ ಮಾರಾಟವಾಗಿದೆ. ಕೆಲವೇ ದಿನಗಳಲ್ಲಿ ಅದೂ ಕೆಜಿಗೆ ₹40 ವರೆಗೆ ಬಂದಿತ್ತು. ಇದೀಗ ಹೋಲ್‌ಸೇಲ್ ಮಾವಿನ ಕಾಯಿ ಮಾರಾಟ ಶುರುವಾಗಿ ಕೆಲವೇ ದಿನಗಳಲ್ಲಿ ದರ ಕುಸಿದಿದೆ. ಪ್ರತಿ ಟನ್ ಮಾವಿನ ಕಾಯಿಗೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ₹48 ಸಾವಿರದಿಂದ ಶುರುವಾಗಿದ್ದು, ಒಂದೇ ವಾರದಲ್ಲಿ ಅದು ₹24-26 ಸಾವಿರಕ್ಕೆ ಕುಸಿಯಿತು. ಹೀಗಾಗಿ ಬೆಳೆಗಾರರರು ಚಿಂತಿತರಾಗಿದ್ದಾರೆ.
ನಿರೀಕ್ಷೆ ಹುಸಿಈ ಬಾರಿ ಇಳುವರಿ ತೀರಾ ಕಡಿಮೆ ಇದ್ದು, ಹೆಚ್ಚಿನ ಬೆಲೆ ಬರುವ ನಿರೀಕ್ಷೆ ಹೊಂದಲಾಗಿತ್ತು. ಮಾವು ಬೆಳೆಗಾರರು ತೋಟದಲ್ಲಿನ ಅಳಿದುಳಿದ ಕಾಯಿ ತಂದು ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಬೆಲೆ ಕುಸಿದಿದೆ. ಧಾರವಾಡದ ಕೆಲಗೇರಿ ಹಾಗೂ ಬೈಪಾಸ್ ಬಳಿ ವ್ಯಾಪಾರಸ್ಥರು ಮಾವಿನ ಕಾಯಿ ಖರೀದಿಸುತ್ತಿದ್ದಾರೆ. ಆದರೆ ಬೆಲೆ ಇಳಿಕೆಯಾದ ಕಾರಣ ಬೆಳೆಗಾರರು ಕಾಯಿ ಮಾರದೇ ಹಣ್ಣು ಮಾಡಿ ತುಸು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯೋಚಿಸಿದ್ದಾರೆ.
ಹವಾಮಾನ ವೈಪರೀತ್ಯ ಈ ಬಾರಿ ಮಾವಿನ ಬೆಳೆ ಮೇಲೆ ತೀರಾ ದುಷ್ಪರಿಣಾಮ ಬೀರಿದ್ದು, ಹತ್ತು ಗಿಡಗಳಲ್ಲಿ ಒಂದು ಗಿಡದಲ್ಲಿ ಕೆಲವು ಕಾಯಿಗಳು ಸಿಗುತ್ತಿವೆ. ಇದ್ದ ಕಾಯಿಗಳ ಮೇಲೆ ಕಪ್ಪುಚುಕ್ಕೆಗಳಿವೆ. ಎಕರೆಗೆ ನಾಲ್ಕು ಕ್ವಿಂಟಲ್ ಪೈಕಿ ಒಂದು ಕ್ವಿಂಟಲ್ ಕಾಯಿ ಸಿಕ್ಕರೆ ಪುಣ್ಯ. ಹೀಗಾಗಿ, ಉತ್ತಮ ಬೆಲೆಯ ನಿರೀಕ್ಷೆ ಇತ್ತು. ಆದರೆ, ಪ್ರತಿ ವರ್ಷಕ್ಕಿಂತ ಈ ಬಾರಿ ದರ ಇಳಿಕೆಯಾಗಿದ್ದು, ಅಷ್ಟೂ ಕಾಯಿಗಳನ್ನು ಹಣ್ಣು ಮಾಡಿ ಮಾರಾಟ ಮಾಡಲು ಚಿಂತಿಸಿದ್ದೇವೆ ಎಂದು ಕೆಲಗೇರಿಯ ಬೆಳೆಗಾರರ ದೇವೇಂದ್ರ ಹಂಚಿನಮನಿ ತಮ್ಮ ಸಂಕಷ್ಟ ಹೇಳಿಕೊಂಡರು.ಇಳುವರಿ ಇಲ್ಲದೇ ರಫ್ತು ಇಲ್ಲ
ಬೆಲೆ ಕುಸಿತ ಹಾಗೂ ರಫ್ತಿನ ಸಮಸ್ಯೆಯ ಮಧ್ಯೆಯೂ ಧಾರವಾಡದ ಮಾವು ಬೆಳೆಗಾರರ ಪ್ರಮೋದ ಗಾಂವಕರ್ ಸಿಂಗಾಪುರಕ್ಕೆ 2 ಟನ್ ಮಾವಿನ ಕಾಯಿಯನ್ನು ಮುಂಬೈ ಮೂಲಕ ಕಳುಹಿಸಿದ್ದಾರೆ. ಯುಎಸ್‌ಎ, ಲಂಡನ್, ಸಿಂಗಾಪುರ ಸೇರಿ ಕೊಲ್ಲಿ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ಬೇಡಿಕೆ ಇದೆ. ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಹಣ್ಣು ರುಚಿ ಇದ್ದರೂ ಮೇಲ್ಮೈಭಾಗದಲ್ಲಿ ಬಿದ್ದಿರುವ ಚುಕ್ಕೆ ಹಾಗೂ ಇಳುವರಿ ಇಲ್ಲದೇ ಇರುವುದರಿಂದ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಮೋದ ಹೇಳುತ್ತಾರೆ.