ದೈವತ್ವಕ್ಕೇರಿದ ತುಳುನಾಡಿನ ಸಿರಿ ಮಹಿಳೆಯರಿಗೆ ಸ್ಫೂರ್ತಿ: ಮಣಿ ಮನಮೋಹನ್‌ ರೈ

| Published : Mar 09 2025, 01:45 AM IST

ದೈವತ್ವಕ್ಕೇರಿದ ತುಳುನಾಡಿನ ಸಿರಿ ಮಹಿಳೆಯರಿಗೆ ಸ್ಫೂರ್ತಿ: ಮಣಿ ಮನಮೋಹನ್‌ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶನಿವಾರ ಕಟೀಲು ಕಾಲೇಜಿನಲ್ಲಿ ‘ಸತ್ಯನಾಪುರದ ಸಿರಿಕುಲು’ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳುನಾಡಿನ ಸಿರಿ ದೈವತ್ವಕ್ಕೇರಿದ ಕಥನ, ಆಕೆಯ ಕುರಿತಾದ ಅಧ್ಯಯನ ಇಂದಿನ ತಲೆಮಾರಿನವರೂ ಮಾಡಬೇಕಾಗಿದ್ದು, ಸಿರಿ ಮಹಿಳೆಯರಿಗೆ ಸ್ಫೂರ್ತಿಯೆಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕಿ ಮಣಿ ಮನಮೋಹನ್ ರೈ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶನಿವಾರ ಕಟೀಲು ಕಾಲೇಜಿನಲ್ಲಿ ನಡೆದ ‘ಸತ್ಯನಾಪುರದ ಸಿರಿಕುಲು’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ತುಳು ಭಾಷೆಯ ಶಬ್ದಗಳಿಗೆ ಇರುವ ನಿಷ್ಪತ್ತಿ ಹಾಗೂ ಅರ್ಥವನ್ನು ಗಮನಿಸುವ ಜೊತೆಗೆ ಬಳಸುವ ಮೂಲಕ ಭಾಷೆಯನ್ನು ಉಳಿಸೋಣ. ನಮ್ಮ ಮಾತೃಭಾಷೆ ನಮ್ಮ ಹೆಮ್ಮೆಯಾಗಬೇಕು. ತುಳುವಿನಲ್ಲಿ ಅಭಿಮಾನದಿಂದ ಮಾತಾಡಬೇಕೆಂದು ಹೇಳಿದರು.

ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ವಿ. ಮಾತನಾಡಿ, ಮಹಿಳಾ ದಿನದ ಈ ಸಂದರ್ಭದಲ್ಲಿ ಸತ್ಯನಾಪುರದ ಸಿರಿಯ ಉಪನ್ಯಾಸವನ್ನು ಇಟ್ಟುಕೊಂಡಿರುವುದು ವಿಶೇಷವಾಗಿದೆ ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ.ಮಾಧವ ಎಂ.ಕೆ. ಪ್ರಸ್ತಾವನೆಗೈದು, ತುಳು ಪೀಠದ ನಿರಂತರ ಕಾರ್ಯಕ್ರಮಗಳ ಬಗ್ಗೆ ವಿವರಿಸುತ್ತಾ, ಶೈಕ್ಷಣಿಕ ಮಟ್ಟದಲ್ಲಿ ತುಳುವಿಗೆ ಸ್ಥಾನ ಸಿಕ್ಕಷ್ಟು ಭಾಷೆ ಗಟ್ಟಿಯಾಗುತ್ತದೆ ಮತ್ತು ತುಳು ಮಾತನಾಡುವ ಭಾಷೆ ಮಾತ್ರವಾಗಿರದೆ ಸಾಹಿತ್ಯಿಕವಾಗಿಯೂ ಔನ್ನತ್ಯ ಪಡೆಯಲು ಸಾಧ್ಯವೆಂದು ತಿಳಿಸಿದರು.ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಿಥುನ್ ಉಡುಪ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಶಶಾಂಕ್, ಅದಿತ್, ಮನೀಶ್, ತೃಷಾ ಶೆಟ್ಟಿ ಉಪಸ್ಥಿತರಿದ್ದರು.

ರಕ್ಷಾ ಭಟ್, ಪೃಥ್ವಿ ಪ್ರಾರ್ಥಿಸಿದರು.ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ಸ್ವಾಗತಿಸಿದರು. ತುಳು ಪೀಠದ ಪ್ರಸಾದ್ ಅಂಚನ್ ನಿರೂಪಿಸಿದರು.