ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿ ಪುತ್ತೂರಿನ ಪ್ರಮುಖ ಯೋಜನೆಯಾಗಿದ್ದು, ಈ ಭಾಗದ ಜನರ ಬಹು ಸಮಯಗಳ ಬೇಡಿಕೆಯಾಗಿರುವ ಈ ರಸ್ತೆಯ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಪ್ರಮುಖ ಯೋಜನೆಗಳ ಜೊತೆಗೆ ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿಯನ್ನು ಆದ್ಯತೆಯಲ್ಲಿ ನಡೆಸಲಾಗುವುದು. ಚತುಷ್ಪಥ ಕಾಮಗಾರಿಗೆ ಕೇಂದ್ರ ಹೆದ್ದಾರಿ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಹಾಗೂ ಮೂಲ ಸೌಕರ್ಯ ನಿಧಿ(ಸಿಆರ್‌ಐಎಫ್) ಅಡಿಯಲ್ಲಿ ರು.೬ ಕೋಟಿ ಅನುದಾನದಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ಅಂತರಾಜ್ಯ ಹೆದ್ದಾರಿ ೧೦೦ರಲ್ಲಿನ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮಚ್ಚಿಮಲೆ ಎಕ್ರೆಜಾಲ್ ಎಂಬಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಜೊತೆಯಾಗಿ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾಣಿ-ಮೈಸೂರು ಹೆದ್ದಾರಿ ರಸ್ತೆ ಮೇಲ್ದರ್ಜೆಗೇರಿಸಲು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜೊತೆಗೆ ಚರ್ಚಿಸಲಾಗಿದೆ. ಏಜೆನ್ಸಿ ಮೂಲಕ ಡಿಪಿಆರ್ ನಡೆಸಲು ಸೂಚನೆ ನೀಡಿದ್ದು ಈ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದರು.
ಕೇಂದ್ರದಿಂದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಡಿಪಿಆರ್‌ನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಮನವಿ ಮಾಡಿದ ಸಂಸದರು ಚತುಷ್ಪಥ ಕಾಮಗಾರಿಗೆ ಅವಶ್ಯಕವಾಗಿರುವ ಭೂ ಸ್ವಾಧೀನ ಹಾಗೂ ಕಾಮಗಾರಿಗೆ ಎಲ್ಲಾ ಸ್ಥಳೀಯ ಆಡಳಿತಗಳು, ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪಕ್ಷ ರಾಜಕೀಯಗಳು ಚುನಾವಣಾ ಸಮಯದಲ್ಲಿ ಮಾತ್ರವಾಗಿದ್ದು, ಅಭಿವೃದ್ಧಿಯಲ್ಲಿ ಯಾವುದೇ ಪಕ್ಷ ರಾಜಕೀಯವಿಲ್ಲ. ಅನುದಾನ ಕೇಂದ್ರದ್ದೇ ಆಗಿರಲಿ ಅಥವಾ ರಾಜ್ಯದಿಂದ ಬರಲಿ ಅಭಿವೃದ್ಧಿಯೊಂದೇ ನಮ್ಮ ಗುರಿ. ನಾನು ಪುತ್ತೂರು ಕ್ಷೇತ್ರ ಅಭಿವೃದ್ಧಿಯ ಗುರಿಯಾಗಿಸಿದರೆ ಸಂಸದರಲ್ಲಿ ಜಿಲ್ಲೆಯ ಅಭಿವೃದ್ಧಿಯ ಕಲ್ಪನೆಯಿದೆ ಎಂದರು.ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿಯ ಬಗ್ಗೆ ಮಾಜಿ ಸಂಸದರು ಹಾಗೂ ಈಗಿನ ಸಂಸದರಲ್ಲಿ ಚರ್ಚಿಸಲಾಗಿದೆ. ಡಿಪಿಆರ್‌ಗೆ ಟೆಂಡರ್ ಆಗಿದ್ದರೂ ಪ್ರಕ್ರಿಯೆ ವಿಳಂಬವಾಗಿದೆ. ಡಿಪಿಆರ್‌ಗೆ ಹೆಚ್ಚಿನ ಅನುದಾನ ನೀಡುವಂತೆ ಸಂಸದರು ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿದ್ದು ರು.೩.೧೯ ಕೋಟಿ ಅನುದಾನ ನೀಡಿದ್ದಾರೆ. ಕಾಮಗಾರಿ ಆದಷ್ಟು ಶೀಘ್ರದಲ್ಲಿ ಆರಂಭಗೊಳ್ಳಬೇಕು ಎಂದು ಹೇಳಿದರು. ಪ್ರ
ಸಾದಂ ಯೋಜನೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಖೇಲೋ ಇಂಡಿಯಾದಲ್ಲಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಸದರೂ ಪ್ರಸ್ತಾವನೆ ಕಳುಹಿಸಿರುವುದಕ್ಕೆ ಶಾಸಕರು ಅಭಿನಂದನೆ ಸಲ್ಲಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸದಸ್ಯೆ ದೀಕ್ಷಾ ಪೈ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಸದಸ್ಯರಾದ ವಸಂತ, ಸುಬ್ರಹ್ಮಣ್ಯ ಬಲ್ಯಾಯ, ಶ್ರೀನಿವಾಸ ರೈ, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯರ್ ರಾಧಾಕೃಷ್ಣ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮುಖಂಡರಾದ ಜಯಲಕ್ಷ್ಮೀ ಶಗ್ರಿತ್ತಾಯ, ನಿತಿಶ್ ಶಾಂತಿವನ, ವಿಶ್ವೇಶ್ವರ ಭಟ್ ಬಂಗಾರಡ್ಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಚಂದ್ರ ಆಳ್ವ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್ ಮತ್ತಿತರರು ಇದ್ದರು.