ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಣಿಪಾಲದ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿಗೆ ಇಸ್ಲಾಂಗೆ ಮತಾಂತರವಾಗುವಂತೆ ಸಹಪಾಠಿ ವೈದ್ಯ ಕಿರುಕುಳ ನೀಡಿರುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.)ಕ್ಕೆ ವಹಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನ ದುರ್ಗಾವಾಹಿನಿ - ಮಾತೃಶಕ್ತಿ ಸಂಘಟನೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರಿಗೆ ಮನವಿ ಸಲ್ಲಿಸಿದವು.ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಹೊರ ರಾಜ್ಯದ ಹಿಂದೂ ವಿದ್ಯಾರ್ಥಿಯೊಬ್ಬರು, ಅದೇ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮಹಮ್ಮದ್ ಡ್ಯಾನಿಶ್ ಖಾನ್, ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ, ಹಲ್ಲೆ, ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉನ್ನತ ವ್ಯಾಸಂಗ ಮಾಡುತ್ತಿರುವ ಮಹಮ್ಮದ್ ಡ್ಯಾನಿಶ್ ಖಾನ್ ಎಂಬಾತ ಅದೇ ಕಾಲೇಜಿನ ಹೊರರಾಜ್ಯದ ಹಿಂದೂ ವಿದ್ಯಾರ್ಥಿನಿಗೆ ಪ್ರೀತಿ, ಮದುವೆಯ ನೆಪದಲ್ಲಿ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದು, ಮಾತ್ರವಲ್ಲದೇ ದೈಹಿಕ ಹಿಂಸೆ, ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದಾಖಲಾದ ದೂರಿನಂತೆ, ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಿರುವುದು ಸ್ವಾಗತಾರ್ಹ.ಆದರೆ ದೇಶದಾದ್ಯಂತ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರೀತಿಯ ಹೆಸರಿನಲ್ಲಿ ಮತಾಂತರ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ರೀತಿ ಮತಾಂತರಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ರಾಷ್ಟ್ರ ವಿರೋಧಿ ಚಟುವಟಿಕೆಗೆ ಬಳಸಿರುವುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿಯೂ ಇದೇ ರೀತಿಯ ಸಂಚು, ರಾಷ್ಟ್ರ ವಿರೋಧಿ ಸಂಘಟನೆಯ ಕೈವಾಡ ಇರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ) ಗೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ನಗರ ಮಾತೃಶಕ್ತಿ ಪ್ರಮುಖ್ ಗೀತಾ ರವಿ ಶೇಟ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಪ್ರತಿಷ್ಠಿತ ಕಾಲೇಜಿನಲ್ಲಿ ಎಷ್ಟೇ ಶಿಕ್ಷಣ ಪಡೆದರೂ ಜಿಹಾದಿಗಳ ಮಾನಸಿಕತೆ ಬದಲಾಗುವುದಿಲ್ಲ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆ. ಈ ಪ್ರಕರಣದ ಹಿಂದೆ ಕಾಣದ ಕೈಗಳ ಬಹು ದೊಡ್ಡ ಷಡ್ಯಂತ್ರ ಇದೆ ಎಂಬ ಅನುಮಾನವಿದೆ. ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಅದನ್ನು ಮಟ್ಟ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್ ಹೇಳಿದರು.