ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದಲ್ಲಿ ತೀರಾ ಅಪಾಯಕಾರಿಯಾದ ನ್ಯೂರೋಬ್ಲಾಸ್ಟೊಮಾ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಬಾಲಕಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಡೈನುಟುಕ್ಸಿಮಾಬ್ ಬೀಟಾ ಎಂಬ ಜೀವ ಉಳಿಸುವ ಚಿಕಿತ್ಸೆ ನೀಡಲಾಗಿದೆ. ಈ ಇಮ್ಯುನೊಥೆರಪಿ ಚಿಕಿತ್ಸೆ ಪ್ರಸ್ತುತ ಈ ಆಕ್ರಮಣಕಾರಿ ಕ್ಯಾನ್ಸರ್ ಗುಣಪಡಿಸುವ ಏಕೈಕ ಚಿಕಿತ್ಸೆ ವಿಧಾನವಾಗಿದೆ.ಹೆಚ್ಚು ಅಪಾಯದ ಈ ನ್ಯೂರೋಬ್ಲಾಸ್ಟೊಮಾ ಬಾಲ್ಯದಲ್ಲಿ ಬರುವ ಅಪರೂಪದ ಮತ್ತು ಸಂಕೀರ್ಣ ಕ್ಯಾನ್ಸರ್ ಆಗಿದ್ದು, ಇಂತಹ ರೋಗಿಗಳಿಗೆ ಸಾಧಾರಣವಾಗಿ ನೀಡುವ ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆಯ ಜೊತೆಗೆ ಮೂಳೆ ಮಜ್ಜೆಯ ಕಸಿ ಮತ್ತು ಇಮ್ಯುನೊಥೆರಪಿ ನೀಡಲಾಗುತ್ತದೆ. ಈ ಎಲ್ಲ ಚಿಕಿತ್ಸೆ ಸಂಯೋಜಿಸುವ ಬಹುಶಿಸ್ತೀಯ ತಂಡ ಈ ಚಿಕಿತ್ಸೆ ನಡೆಸುತ್ತದೆ. ಇದಕ್ಕೆ ಬಳಸುವ ಡಿನುಟುಕ್ಸಿಮಾಬ್ ಬೀಟಾ ಎಂಬ ಅನುಮೋದಿತ ಔಷಧಿ, ಆಯ್ದ ನ್ಯೂರೋಬ್ಲಾಸ್ಟೊಮಾ ಕ್ಯಾನ್ಸರ್ ಕೋಶಗಳನ್ನು ನಾಶಮಾಡುತ್ತವೆ. ಇದರಿಂದಾಗಿ ಈ ಮಕ್ಕಳಲ್ಲಿ ಬದುಕುಳಿಯುವಿಕೆ ಸಾಧ್ಯತೆ ಶೇ 30 - 40ರಷ್ಟು ಹೆಚ್ಚಾಗುತ್ತದೆ.
ಆದರೆ, ಈ ಔಷಧವನ್ನು ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಆದ್ದರಿಂದ ಚಿಕಿತ್ಸೆಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಸೇವ್ ದಿ ಡ್ರೀಮ್ಸ್, ಮಣಿಪಾಲ್ ಫೌಂಡೇಶನ್ ಮತ್ತು ಒನ್ ಗುಡ್ ಸ್ಟೆಪ್ ಫೌಂಡೇಶನ್‌ನಂತಹ ಪ್ರತಿಷ್ಠಾನಗಳ ಸಹಕಾರದಿಂದ ಪೋಷಕರಿಗೆ ಹಣಕಾಸು ಹೊಂದಿಸಲು ಸಾಧ್ಯವಾಯಿತು.ಮಕ್ಕಳ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಮಾರ್ಗದರ್ಶನದ ಮೇಲೆ ನುರಿತ ವೈದ್ಯರ ತಂಡ ಈ ಚಿಕಿತ್ಸೆ ನೀಡಿದೆ.
ಈ ನವೀನ ಚಿಕಿತ್ಸೆಯ ಬಗ್ಗೆ ಡಾ. ವಾಸುದೇವ ಭಟ್ ಮಾಹಿತಿ ನೀಡಿ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಇಮ್ಯುನೊಥೆರಪಿ ಮುಂದಿನ ಚಿಕಿತ್ಸಾ ಆಯ್ಕೆಯಾಗಿದ್ದು, ಇದು ಕಿಮೊಥೆರಪಿಯ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಫಲಿತಾಂಶಗಳನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ., ಕರ್ನಾಟಕದ ಕರಾವಳಿಯಲ್ಲಿ ಯಶಸ್ವಿಯಾಗಿ ಇಮ್ಯುನೊಥೆರಪಿಗೆ ಒಳಗಾದ ಮೊದಲ ಮಗು ಇದಾಗಿದೆ. ಚಿಕಿತ್ಸೆ ಮುಗಿದು 12 ತಿಂಗಳು ತುಂಬಿದೆ, ಮಗು ಆರೋಗ್ಯವಾಗಿದ್ದು, ಶಾಲೆಗೆ ಹೋಗಲು ಸಿದ್ಧವಾಗಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಈ ಸಾಧನೆ ಕರಾವಳಿ ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತ ಕುಟುಂಬಗಳಿಗೆ ಹೊಸ ಭರವಸೆ ತರುವುದಲ್ಲದೆ, ಮಕ್ಕಳ ಆಂಕೊಲಾಜಿಯಲ್ಲಿ ಪ್ರಗತಿಗೆ ದಾರಿದೀಪವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.