ಸಾರಾಂಶ
ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷವಾಗಿ ಪ್ರಸಕ್ತ ಸಾಲಿನ ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭವಾಗಿದ್ದು, ನ.೩೦ ರವರೆಗೆ ನೋಂದಾಯಿಸಬಹುದಾಗಿದೆ
ಕನ್ನಡಪ್ರಭ ವಾರ್ತೆ ಕುಮಟಾ
ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷವಾಗಿ ಪ್ರಸಕ್ತ ಸಾಲಿನ ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭವಾಗಿದ್ದು, ನ.೩೦ ರವರೆಗೆ ನೋಂದಾಯಿಸಬಹುದಾಗಿದೆ ಎಂದು ಮಾಹೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ ಶೆಟ್ಟಿ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ ೨೦೨೫ರ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಿದೆ. ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ.ಪೈ ಅವರ ಮಾರ್ಗದರ್ಶನದಲ್ಲಿ ೨೦೦೦ರಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. ಕಳೆದ ೨೫ ವರ್ಷಗಳಲ್ಲಿ ಕೋಟ್ಯಂತರ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದ್ದು, ಕಳೆದ ಸಾಲಿನಲ್ಲಿ ೧.೨೫ ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು ₹೨೧.೮೦ ಕೋಟಿ ಮೊತ್ತದ ಆರೋಗ್ಯ ಸೌಲಭ್ಯವನ್ನು ಕಾರ್ಡಿನ ಮೂಲಕ ನೀಡಲಾಗಿದೆ. ಆರೋಗ್ಯ ಕಾರ್ಡಿನಡಿ ಒಟ್ಟೂ ೬.೭೨ ಲಕ್ಷ ಸದಸ್ಯರಿದ್ದಾರೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಡ್‌ದಾರರಿಗೆ ತಜ್ಞ ಮತ್ತು ಸೂಪರ್-ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ ಶೇ.೫೦ ರಿಯಾಯಿತಿ(ಒಪಿಡಿ), ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.೨೫, ರೇಡಿಯಾಲಜಿ, ಒಪಿಡಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯ ಮೇಲೆ ಶೇ.೨೦, ಡಯಾಲಿಸಿಸ್‌ನಲ್ಲಿ ₹೧೦೦, ಆಸ್ಪತ್ರೆ ಔಷಧಿಗಳ ಮೇಲೆ ಶೇ.೧೦ ವರೆಗೆ ಹಾಗೂ ಸಾಮಾನ್ಯ ವಾರ್ಡ್ ಒಳರೋಗಿಗಳ ಬಿಲ್‌ಗಳಲ್ಲಿ ಶೇ.೨೫ ರಿಯಾಯಿತಿ ಇರಲಿದೆ. ಕಾರ್ಡ್‌ದಾರರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ-ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆಎಂಸಿ ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ-ಕಟೀಲು, ಮಣಿಪಾಲ ಆಸ್ಪತ್ರೆ-ಗೋವಾ ಮತ್ತು ಮಣಿಪಾಲ ಹಾಗೂ ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಪ್ರಯೋಜನ ಪಡೆಯಬಹುದು ಎಂದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಸಹ ವ್ಯವಸ್ಥಾಪಕ ಚೇತನ್, ಪ್ರತಿನಿಧಿ ಅರುಣ ಗುನಗಾ, ಮಾಹಿತಿ ಕೇಂದ್ರದ ಸುಧಾ ಪಟಗಾರ ಇದ್ದರು.