ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ವಿಜ್ಞಾನ ವಿಭಾಗವು ಕ್ಲಾರಸ್ 700 - HD ಅಲ್ಟ್ರಾ - ವೈಡ್‌ಫೀಲ್ಡ್ ಫಂಡಸ್ ಇಮೇಜಿಂಗ್ ಮತ್ತು ಫ್ಲೋರೆಸ್ಸಿನ್ ಆಂಜಿಯೋಗ್ರಫಿ ಕ್ಯಾಮೆರಾವನ್ನು ಇತ್ತೀಚೆಗೆ ರೋಗಿಗಳ ಆರೈಕೆಗೆ ಸಮರ್ಪಿಸಲಾಯಿತು.ಝೈಸ್ ಕಂಪನಿ ಅಭಿವೃದ್ಧಿಪಡಿಸಿದ ಈ ಅತ್ಯಾಧುನಿಕ ರೆಟಿನಲ್ ಇಮೇಜಿಂಗ್ ಸಿಸ್ಟಮ್, ವಿಶೇಷವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಕಣ್ಣಿನ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಈ ಸುಧಾರಿತ ಉಪಕರಣವನ್ನು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹಕುಲಪತಿ ಡಾ. ಶರತ್ ಕುಮಾರ್ ರಾವ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ರೋಗಿಗಳ ಆರೈಕೆಯಲ್ಲಿ ಇತ್ತೀಚಿನ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಕಸ್ತೂರ್ಬಾ ಆಸ್ಪತ್ರೆಯ ಬದ್ಧತೆಯಾಗಿದೆ. ನಮ್ಮ ನೇತ್ರಶಾಸ್ತ್ರ ವಿಭಾಗಕ್ಕೆ ಕ್ಲಾರಾಸ್ 700 ಅನ್ನು ಸೇರಿಸುವುದು ಅತ್ಯುನ್ನತ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವ ನಮ್ಮ ಧ್ಯೇಯವನ್ನು ಒತ್ತಿಹೇಳುತ್ತದೆ. ವಿಶೇಷವಾಗಿ ಮಧುಮೇಹ ರೆಟಿನೋಪತಿ, ವಯಸ್ಸಿಗೆ ಸಂಬಂಧಿಸಿದ ರೆಟಿನಾದ ಕಾಯಿಲೆಗಳು ಮತ್ತು ಇತರ ರೆಟಿನಾದ ಅಸ್ವಸ್ಥತೆಗಳಿಗೆ ಇದು ಬಹುವಾಗಿ ಅನೂಕೂಲವಾಗಲಿದೆ ಎಂದರು.ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಹ ಡೀನ್ ಡಾ.ನವೀನ್ ಎಸ್. ಸಾಲಿನ್ಸ್, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕಾಮತ್ ಮತ್ತು ಹಿರಿಯ ನೇತ್ರ ತಜ್ಞರು ಉಪಸ್ಥಿತರಿದ್ದರು. ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶೈಲಜಾ ಎಸ್. ಹೊಸ ತಂತ್ರಜ್ಞಾನದ ಪರಿಚಯ ಮಾಡಿದರು.