ಮಣಿಪಾಲ: ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (ಎನ್‌ಬಿಟಿಸಿ), ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಸಹಯೋಗದಲ್ಲಿ “ರಕ್ತ ವರ್ಗಾವಣೆ ಸೇವೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಯೋಗವನ್ನು ಬಲಪಡಿಸುವುದು” ಕುರಿತು ಒಂದು ದಿನದ ಕಾರ್‍ಯಾಗಾರ ನಡೆಯಿತು. ದಕ್ಷಿಣ-ಪೂರ್ವ ಭಾರತದ 100ಕ್ಕೂ ಹೆಚ್ಚು ವೈದ್ಯಕೀಯ ಅಧಿಕಾರಿಗಳು ಮತ್ತು ರಕ್ತ ಕೇಂದ್ರದ ಉಸ್ತುವಾರಿಗಳು ಭಾಗವಹಿಸಿದ್ದರು.

ಕಾರ್‍ಯಾಗಾರ ಉದ್ಘಾಟಿಸಿದ ಮಾಹೆ ವಿವಿಯ ಸಹ ಉಪ ಕುಲಪತಿ ಡಾ. ಶರತ್ ರಾವ್, ನಮ್ಮ ದೇಶದಲ್ಲಿ ರಕ್ತ ವರ್ಗಾವಣೆ ಸೇವೆಗಳನ್ನು ಬಲಪಡಿಸಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವು ಬಹಳ ಮುಖ್ಯವಾಗಿದೆ. ಇಂತಹ ಸಹಯೋಗಗಳು ರೋಗಿಗಳಿಗೆ ರಕ್ತ ಸೇವೆಗಳ ಗುಣಮಟ್ಟ, ಸುರಕ್ಷತೆ ಮತ್ತು ಪ್ರವೇಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ರಕ್ತ ಉತ್ಪನ್ನಗಳನ್ನು ಒದಗಿಸುವಲ್ಲಿ, ಅದಕ್ಕೆ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ಕೆಎಂಸಿಯ ಇಮ್ಯುನೊ ಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗ (ಐಎಚ್‌ಬಿಟಿ)ವು ಬದ್ಧವಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪ ಮಹಾ ನಿರ್ದೇಶಕಿ ಡಾ. ಮೇಘಾ ಪ್ರವೀಣ್ ಖೋಬ್ರಗಡೆ ಅವರು, ರಾಷ್ಟ್ರೀಯ ರಕ್ತ ನೀತಿಯ ಕುರಿತು ಮಾತನಾಡಿ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಉತ್ತಮ ಸಮನ್ವಯದ ಮೂಲಕ ರಕ್ತ ವರ್ಗಾವಣೆ ಸೇವೆಗಳನ್ನು ಬಲಪಡಿಸಲು ಈ ಕಾರ್ಯಾಗಾರವನ್ನು ಕಲ್ಪಿಸಲಾಗಿದೆ. ಖಾಸಗಿ ರಕ್ತ ಕೇಂದ್ರಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಪರಿಹರಿಸುವುದು ಮತ್ತು ದೇಶಾದ್ಯಂತ ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ ರಕ್ತ ಸೇವಾ ವ್ಯವಸ್ಥೆಯನ್ನು ನಿರ್ಮಿಸುವುದು ಇದರ ಗುರಿಯಾಗಿದೆ ಎಂದರು

ಮಣಿಪಾಲದ ಕೆಎಂಸಿಯ ಡೀನ್ ಡಾ. ಅನಿಲ್ ಭಟ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಡಾ. ಶಮೀ ಶಾಸ್ತ್ರಿ ಉಪಸ್ಥಿತರಿದ್ದರು. ಐಎಚ್‌ಬಿಟಿಯ ಮುಖ್ಯಸ್ಥ ಡಾ. ಗಣೇಶ್ ಮೋಹನ್ ವಂದಿಸಿದರು.