ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಕಸ್ತೂರ್ಬಾ ಆಸ್ಪತ್ರೆಯಲ್ಲಿ ವಯಸ್ಸಾದ ರೋಗಿಯೊಬ್ಬರಿಗೆ ಅನ್ನನಾಳದ ರಂಧ್ರಕ್ಕೆ ಎಂಡೊಸ್ಕೋಪಿಕ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದು ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿದೆ.ರೋಗಿಯ ದೊಡ್ಡ ಮಧ್ಯ ಅನ್ನನಾಳದಲ್ಲಿ ರಂಧ್ರವಾಗಿದ್ದು, ಅವರ ವಯಸ್ಸನ್ನು ಪರಿಗಣಿಸಿ ಶಸ್ತ್ರಚಿಕಿತ್ಸೆ ಸಾಧ್ಯವಿರಲಿಲ್ಲ. ಬದಲಾಗಿ ಗ್ಯಾಸ್ಟ್ರೋ ಎಂಟೆರೊಲೊಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ಅವರ ನೇತೃತ್ವದ ವೈದ್ಯಕೀಯ ತಂಡವು ಅನ್ನನಾಳದ ರಂಧ್ರವನ್ನು ಸಂಪೂರ್ಣವಾಗಿ ಮುಚ್ಚಲು ಲೋಹದ ಸ್ಟೆಂಟನ್ನು ಇರಿಸುವ ಒಂದು ನವೀನ ವಿಧಾನವನ್ನು ಆರಿಸಿಕೊಂಡಿತು. ಜೊತೆಗೆ ಇಂಟರ್ ಕೊಸ್ಟಲ್ ಡ್ರೈನೇಜ್ ಚಿಕಿತ್ಸೆಯನ್ನು ನಡೆಸಲಾಯಿತು.ಇದರ ನಂತರ ರೋಗಿಯು ಎಂಡೋವಕ್ ಚಿಕಿತ್ಸೆಯ ನಾಲ್ಕು ಅವಧಿಗಳನ್ನು ಪಡೆದರು. ಇದು ಗಮನಾರ್ಹ ಸುಧಾರಣೆಗೆ ಕಾರಣವಾಯಿತು. ಈ ಯಶಸ್ಸಿನ ಆಧಾರದ ಮೇಲೆ, ರಂಧ್ರವನ್ನು ಮುಚ್ಚಲು ಎಕ್ಷ್ ಟ್ರಾಕ್ ಎಂಡೋಸ್ಕೋಪಿಕ್ ಹೆಲಿಕ್ಸ್ ಟ್ಯಾಕಿಂಗ್ ಸಿಸ್ಟಮ್ ಅನ್ನು ಬಳಸಿ ಯಶಸ್ವಿಯಾಯಿತು. ಇದು ದಕ್ಷಿಣ ಭಾರತದಲ್ಲಿ ಪ್ರಥಮ ಪ್ರಯೋಗವಾಗಿದ್ದು, ಅಂತಿಮವಾಗಿ ರಂಧ್ರವು ಸಂಪೂರ್ಣ ಯಶಸ್ವಿಯಾಗಿ ಮುಚ್ಚಿತು.ಡಾ.ಶಿರನ್ ಶೆಟ್ಟಿ ನೇತೃತ್ವದ ಡಾ.ಬಾಲಾಜಿ, ಡಾ.ಸುಜಯ್ ಪ್ರಭಾತ್, ಡಾ.ಪ್ರವೀಣ್, ಡಾ.ಅಭಯ್, ಡಾ.ಶ್ರೀಮಾನ್, ಡಾ. ಸಚಿನ್ (ಅರಿವಳಿಕೆ) ಮತ್ತು ಡಾ. ಶ್ವೇತಾ ಅವರ ಸಾಮೂಹಿಕ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಭಟ್ ಹೇಳಿದ್ದಾರೆ.ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಈ ಚಿಕಿತ್ಸೆಯಲ್ಲಿ ಎಕ್ಸ್ ಟ್ಯಾಕ್ ವ್ಯವಸ್ಥೆಯಂತಹ ಅತ್ಯಾಧುನಿಕ ತಂತ್ರಗಳ ಯಶಸ್ವಿ ಅನುಷ್ಠಾನವು ಅನ್ನನಾಳದ ರಂಧ್ರಗಳನ್ನು ನಿರ್ವಹಿಸುವಲ್ಲಿ ಆಸ್ಪತ್ರೆಯ ಪ್ರಮುಖ ಪ್ರಗತಿಯನ್ನು ಸೂಚಿಸುತ್ತದೆ. ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಇದು ಆಶಾಕಿರಣವಾಗಿದೆ ಎಂದಿದ್ದಾರೆ.