ಮಣಿಪಾಲ ಕೆಎಂಸಿ: ಗ್ಲುಕೋಮಾ ಡಯಾಗ್ನೋಸ್ಟಿಕ್ಸ್ ಕಾರ್ಯಾಗಾರ

| Published : Mar 15 2024, 01:21 AM IST

ಮಣಿಪಾಲ ಕೆಎಂಸಿ: ಗ್ಲುಕೋಮಾ ಡಯಾಗ್ನೋಸ್ಟಿಕ್ಸ್ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಟಿ.ಎಂ.ಎ.ಪೈ ಅವರ 125ನೇ ಜನ್ಮದಿನಾಚರಣೆಯ ಗೌರವಾರ್ಥವಾಗಿ ‘ಮಣಿಪಾಲ್ ಹಾಟ್ಸ್: ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಷನ್ಸ್ - ಗ್ಲುಕೋಮಾ ಡಯಾಗ್ನೋಸ್ಟಿಕ್ಸ್’ ಎಂಬ ಕಾರ್ಯಾಗಾರ ನಡೆಯಿತು. ಉಡುಪಿ ಜಿಲ್ಲಾ ಆಪ್ತಾಲ್ಮಿಕ್ ಸೊಸೈಟಿಯ ಅಧ್ಯಕ್ಷ ಡಾ. ಶ್ರೀನಾಥ್ ಕಾಮತ್, ಕಾರ್ಯಾಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲವಿಶ್ವ ಗ್ಲುಕೋಮಾ ಸಪ್ತಾಹ-2024ರ ಅಂಗವಾಗಿ ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗವು ಸಂಸ್ಥೆಯ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ 125ನೇ ಜನ್ಮದಿನಾಚರಣೆಯ ಗೌರವಾರ್ಥವಾಗಿ ‘ಮಣಿಪಾಲ್ ಹಾಟ್ಸ್: ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಷನ್ಸ್ - ಗ್ಲುಕೋಮಾ ಡಯಾಗ್ನೋಸ್ಟಿಕ್ಸ್’ ಎಂಬ ಕಾರ್ಯಾಗಾರವನ್ನು ಆಯೋಜಿಸಿತ್ತು.ಉಡುಪಿ ಜಿಲ್ಲಾ ಆಪ್ತಾಲ್ಮಿಕ್ ಸೊಸೈಟಿಯ ಅಧ್ಯಕ್ಷ ಡಾ. ಶ್ರೀನಾಥ್ ಕಾಮತ್, ಕಾರ್ಯಾಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್ ಮಾತನಾಡಿ, ಗ್ಲುಕೋಮಾದಂತಹ ನಿಶಬ್ದ ಕುರುಡು ಕಾಯಿಲೆಗಳನ್ನು ಸಮಯೋಚಿತವಾಗಿ ಗುರುತಿಸಿದರೆ, ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲದೆ ಒಟ್ಟಾರೆ ಸಮುದಾಯ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭ ಸಹ ಪ್ರಾಧ್ಯಾಪಕಿ ಡಾ. ನೀತಾ ಕೆಐಆರ್, ಗ್ಲುಕೋಮಾದ ಜಾಗತಿಕ ಪ್ರಭಾವದ ಬಗ್ಗೆ ಮಾತನಾಡಿ, ಗ್ಲುಕೋಮಾ ಒಮ್ಮೆ ದೃಷ್ಟಿ ಕಳೆದುಕೊಂಡರೆ ಬದಲಾಯಿಸಲಾಗದ ಕುರುಡುತನದ ಪ್ರಮುಖ ಕಾರಣ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.‘ಗ್ಲುಕೋಮಾ ಮುಕ್ತ ಜಗತ್ತಿಗೆ ಎಲ್ಲರೂ ಒಂದಾಗಬೇಕು’ ಎಂದು ಒತ್ತಾಯಿಸಿ ಸಾಮೂಹಿಕ ಕ್ರಮಕ್ಕೆ ಕರೆ ನೀಡಿದರು. ಈ ಸಂದರ್ಭ ಕರ್ನಾಟಕ ನೇತ್ರ ವಿಜ್ಞಾನ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ನೇತ್ರ ಸಂಸ್ಥೆಯ ಕಾರ್ಯದರ್ಶಿ ಡಾ.ವಿಕ್ರಂ ಜೈನ್ ಹಾಗೂ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಹಿರಿಯ ನೇತ್ರ ತಜ್ಞೆ ಡಾ.ಲಾವಣ್ಯ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಒಇಯು ಹಳೆ ವಿದ್ಯಾರ್ಥಿಗಳ ರೋಲಿಂಗ್ ಟ್ರೋಫಿ ಇಂಟರ್ ಕಾಲೇಜು ಸ್ನಾತಕೋತ್ತರ ವಿದ್ಯಾರ್ಥಿಗಳ ಚರ್ಚಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉಡುಪಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಸ್ನಾತಕೋತ್ತರ ಪದವೀಧರರು ಮತ್ತು ನೇತ್ರ ಸಲಹೆಗಾರರನ್ನು ಒಳಗೊಂಡ 100ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದ ಕಾಲೇಜುಗಳಿಂದ ಉತ್ಸಾಹದಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.