ಜನವಸತಿ ಪ್ರದೇಶದಲ್ಲಿ ಸಂಗ್ರಹಗೊಂಡ ಚರಂಡಿ ನೀರು: ಪ್ರತಿಭಟನೆ

| Published : Mar 15 2024, 01:21 AM IST

ಜನವಸತಿ ಪ್ರದೇಶದಲ್ಲಿ ಸಂಗ್ರಹಗೊಂಡ ಚರಂಡಿ ನೀರು: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರು ಚರಂಡಿಯ ಹೊಲಸು ನೀರಿನಿಂದ ರೋಸಿ ಹೋಗಿದ್ದಾರೆ. ಚರಂಡಿ ನೀರು ರಸ್ತೆಯ ಪಕ್ಕದಲ್ಲಿ ರಕ್ಷಣೆಯಿಲ್ಲದ ಪಾಳುಬಾವಿಗೆ ನುಗ್ಗಿದ್ದರಿಂದ ಅದು ಭರ್ತಿಯಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.

ಸಂಡೂರು: ತಾಲೂಕಿನ ಕುರೆಕುಪ್ಪ ಪುರಸಭೆಯ ೧೭ನೇ ವಾರ್ಡಿನ ಜನವಸತಿ ಪ್ರದೇಶವು ಹಲವಾರು ದಿನಗಳಿಂದ ಚರಂಡಿಯ ನೀರಿನಿಂದ ಆವೃತವಾಗಿದ್ದು, ಪುರಸಭೆಯ ಅಧಿಕಾರಿಗಳು ಚರಂಡಿ ನೀರನ್ನು ತೆರವುಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ವಾರ್ಡಿನ ಜನತೆ ಪ್ರತಿಭಟನೆ ನಡೆಸಿದರು.

ವಾರ್ಡಿನ ನಿವಾಸಿ ಮಂಜುಳಾ ಮಾತನಾಡಿ, ಪುರಸಭೆಯ ನಾಲ್ಕು ವಾರ್ಡಿನ ಚರಂಡಿಯ ನೀರು ರೈಲ್ವೆ ಗೇಟ್‌ನ ಪಕ್ಕದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಹರಿಯುತ್ತಿತ್ತು. ಆದರೆ ಖಾಸಗಿ ವ್ಯಕ್ತಿ ಆ ಸ್ಥಳ ಆಕ್ರಮಿಸಿ ಚರಂಡಿ ನೀರಿನ ಸ್ಥಳದಲ್ಲಿ ಮಣ್ಣಿನ ಒಡ್ಡು ಹಾಕಿ ತಡೆದಿದ್ದಾರೆ. ಇದರಿಂದ ಗಲೀಜಿನ ನೀರು ನಿಂತಲ್ಲೆ ನಿಂತು ವಸತಿ ಪ್ರದೇಶಕ್ಕೆ ನುಗ್ಗಿದೆ ಎಂದರು.

ಜನರು ಚರಂಡಿಯ ಹೊಲಸು ನೀರಿನಿಂದ ರೋಸಿ ಹೋಗಿದ್ದಾರೆ. ಚರಂಡಿ ನೀರು ರಸ್ತೆಯ ಪಕ್ಕದಲ್ಲಿ ರಕ್ಷಣೆಯಿಲ್ಲದ ಪಾಳುಬಾವಿಗೆ ನುಗ್ಗಿದ್ದರಿಂದ ಅದು ಭರ್ತಿಯಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಸಂಗ್ರಹಗೊಂಡ ಹೊಲಸು ನೀರು ಜನರ ಸ್ವಂತ ಕೊಳವೆಬಾವಿಗಳಿಗೆ ಸೇರಿ ಆ ನೀರು ಕೂಡ ಕಲುಶಿತಗೊಳ್ಳುತ್ತಿದೆ ಎಂದು ದೂರಿದರು.

ಪುರಸಭೆಯ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಜನವಸತಿ ಪ್ರದೇಶಕ್ಕೆ ಚರಂಡಿಯ ನೀರು ನುಗ್ಗಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಸ್ಥಳ ಪರಿಶೀಲಿಸಿ ಸಂಗ್ರಹಗೊಂಡ ಚರಂಡಿ ನೀರನ್ನು ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಕುರೆಕುಪ್ಪ ಪುರಸಭೆಯ ಮುಖ್ಯಾಧಿಕಾರಿ ಸತೀಶ್‌ ಗುಡ್ಡೆ ತಿಳಿಸಿದರು.ನಿವಾಸಿಗಳಾದ ಮೆಹಬೂಬಿ, ರತ್ನಮ್ಮ, ಪ್ರಿಯಾಸಿಂಧು, ಅರ್ಚನಾ, ರವಿಕುಮಾರ್, ಲೋಕೇಶ್, ರಾಮಚರಣ್, ಆನಂದ, ಸುಭಾಷ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.