ಸಾರಾಂಶ
ಬೀರೂರಿನ ಕನ್ನಡ ಸಂಘದಿಂದ ಅಧ್ಯಕ್ಷರಿಗೆ ಗೌರವ ಸಮರ್ಪಣೆಕನ್ನಡಪ್ರಭ ವಾರ್ತೆ,ಬೀರೂರು
ಕನ್ನಡ ಸಾಹಿತ್ಯ ಪರಿಷತ್‌ಗೆ 1.50 ಕೋಟಿ ಕನ್ನಡಿಗರನ್ನು ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ. ಕನ್ನಡ ಭಾಷೆ ಮತ್ತು ಶಾಲೆಗಳ ಉಳಿವಿಗೆ ಸಾಹಿತ್ಯ ಪರಿಷತ್ ಜತೆ ಕನ್ನಡ ಸಂಘಟನೆಗಳು ಜೋಡೆತ್ತಿನಂತೆ ದುಡಿಯಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಮನವಿ ಮಾಡಿದರು.ಗುರುವಾರ ಕನ್ನಡ ಸಂಘಕ್ಕೆ ಭೇಟಿ ನೀಡಿ ಸಂಘದಿಂದ ಗೌರವ ಸ್ವೀಕರಿಸಿ ಮಾತನಾಡಿ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಕಂಪು ಹೆಚ್ಚಾಗಿ ಪಸರಿಸಿದೆ ಎಂದರು. ಕನ್ನಡ ಸಂಘಗಳು, ಕರ್ನಾಟಕ ಸಂಘಗಳು ಹಾಗೂ ಕನ್ನಡ ಭವನಗಳ ಅಭಿವೃದ್ಧಿಯಾಗಬೇಕೆನ್ನುವುದು ನನ್ನ ಧ್ಯೇಯ. ರಾಜ್ಯದೆಲ್ಲೆಡೆ ಕನ್ನಡದ ಫಲಕಗಳೇ ರಾರಾಜಿಸಬೇಕು ಎನ್ನುವುದು ಪ್ರತಿ ಕನ್ನಡಿಗನ ಕನಸು ನನಸಾಗುವ ಕಾಲ ಬಂದಿದೆ. ಎಲ್ಲ ಜಿಲ್ಲಾ ಮಟ್ಟದ ನ್ಯಾಯಾಲಯದ ತೀರ್ಪುಗಳನ್ನು ಕನ್ನಡದಲ್ಲಿಯೇ ನೀಡಬೇಕು ಎನ್ನುವ ಆದೇಶವಾಗಿದ್ದು, ಅದು ಕನ್ನಡಕ್ಕೆ ಸಿಕ್ಕ ಗೌರವ ಎಂದು ಹೇಳಿದರು.ಶಿಕ್ಷಣ, ಉದ್ಯೋಗದಲ್ಲೂ ಕನ್ನಡ ಮಾಧ್ಯಮಕ್ಕೆ ಮೀಸಲು ನಿಗಧಿಪಡಿಸಲಾಗಿದೆ. ಇವೆಲ್ಲವೂ ಹೋರಾಟಕ್ಕೆ ಸಿಕ್ಕ ಫಲ. ಕನ್ನಡ ಕಲಿಯದವರಿಗೂ ಕಲಿಸುವ ಜವಾಬ್ದಾರಿ ಸರ್ಕಾರವೇ ತೆಗೆದುಕೊಂಡಿದ್ದು, ಅದಕ್ಕಾಗಿ ಕನ್ನಡ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ತಿಳಿಸಿದರು. ಸಾಹಿತ್ಯ ದಿಗ್ಗಜರ ಕೃತಿಗಳ ಸಾರಾಂಶವನ್ನು 100 ಪುಟದ ಪುಸ್ತಕಗಳಲ್ಲಿ ಸಾಹಿತ್ಯ ಗುಚ್ಛ ರೂಪದಲ್ಲಿ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಧ್ಯೇಯದಲ್ಲಿ ಭಾಷೆಗಾಗಿ ಉತ್ತಮ ಕೆಲಸ ಮಾಡಿದವರು ಹಾಗೂ ಸಂಘಟನೆಗಳನ್ನು ಕರ್ನಾಟಕ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಗೌರವಿಸುವ ಗುರಿ ಹೊಂದಲಾಗಿದೆ. ಅದರ ಅಂಗವಾಗಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಬೀರೂರಿನ ಕನ್ನಡ ಸಂಘವನ್ನು ಗೌರವಿಸುವುದಾಗಿ ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಬೀರೂರು ಕನ್ನಡ ಸಂಘ ಜನಸಾಮಾನ್ಯರ ಕೈಗೆಟಕುವಂತೆ ಕಾರ್ಯ ನಿರ್ವಸುತ್ತಿರುವುದು ಶ್ಲಾಘನೀಯ. ಎಲ್ಲ ಕನ್ನಡಿಗರೂ ಕಸಾಪ ಸದಸ್ಯತ್ವಕ್ಕೆ ನೋಂದಾಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಸಾಪ ಉಪಾಧ್ಯಕ್ಷ ನಾರಾಯಣ, ಕನ್ನಡ ಸಂಘದ ಅಧ್ಯಕ್ಷ ವಿಶ್ವನಾಥಗೌಡ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಶ್ರೇಷ್ಠಿ, ಬಿ.ಸಿ.ಪಾಲಾಕ್ಷ, ಬಾಬುಕುಮಾರ್, ಎಸ್.ಎಸ್.ದೇವರಾಜ್, ಚಕ್ಲಿ ಚಂದ್ರಶೇಖರ್, ಸಿ.ವಿ.ಶಂಕರ್, ಜಿ.ಎನ್.ರಮೇಶ್, ಎನ್.ಡಿ.ಸೀತಾಲಕ್ಷ್ಮಿ, ಬೀರೂರು ಹೋಬಳಿ ಘಟಕದ ಅಧ್ಯಕ್ಷ ಹರಿಪ್ರಸಾದ್, ಶಬರೀಶ್, ಸವಿತಾರಮೇಶ್ ಸೇರಿದಂತೆ ಮತ್ತಿತರರು ಇದ್ದರು.14 ಬೀರೂರು 1ಬೀರೂರಿನ ಕನ್ನಡ ಸಂಘಕ್ಕೆ ಭೇಟಿ ನೀಡಿದ ಕಸಾಪ ರಾಜ್ಯ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಕನ್ನಡ ಸಂಘದಿಂದ ಗೌರವಿಸಲಾಯಿತು. ಸಂಘದ ಅಧ್ಯಕ್ಷ ವಿಶ್ವನಾಥಗೌಡ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಶ್ರೇಷ್ಠಿ, ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಇದ್ದರು.