ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಮಾಹೆಯ ಅಂಗಸಂಸ್ಥೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್ ಸರ್ಜರಿ ಕೇಂದ್ರವನ್ನು ಒಲಿಂಪಿಕ್ ಬ್ಯಾಡ್ಮಿಂಟನ್ ಆಟಗಾರ್ತಿ ನೈನಾ ನೆಹ್ವಾಲ್ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದು ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡದಲ್ಲಿಯೇ ಬದುಕುತಿದ್ದೇವೆ, ಆದರೆ ಅದೃಷ್ಟವಶಾತ್ ಭಾರತದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯವಿದೆ. ವೈದ್ಯಕೀಯ ರಂಗವನ್ನು ಎಐ ಮತ್ತು ರೊಬೋಟಿಕ್ ಪ್ರವೇಶ ಮಾಡುತ್ತಿರುವುದು ಹೊಸ ಭರವಸೆಯ ಬೆಳವಣಿಗೆ ಎಂದರು.ಕ್ರೀಡಾಪಟುಗಳಿಗೂ ಸಾಕಷ್ಟು ಬಾರಿ ಗಾಯದ ಸಮಸ್ಯೆಗಳಾಗುತ್ತವೆ. ಕ್ರೀಡಾಪಟುವಿಗೆ ನಿಖರತೆ, ಶೀಘ್ರ ಚೇತರಿಕೆ ಮತ್ತು ಗರಿಷ್ಟ ಕಾರ್ಯಕ್ಷಮತೆ ಆತನ ಸಾಧನೆಯಲ್ಲಿ ಬಹಳ ನಿರ್ಣಾಯಕವಾಗಿರುತ್ತವೆ. ಅದಕ್ಕಾಗಿ ಕ್ರೀಡಾ ತರಬೇತಿಯಲ್ಲಿ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಅದೇ ರೀತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನಿಖರತೆ ಮತ್ತು ಕ್ಷಿಪ್ರ ಚೇತರಿಕೆಗಾಗಿ ರೋಬೋಟಿಕ್ ಬಳಕೆ ಸಾಧ್ಯ ಎಂಬುದನ್ನು ಮಣಿಪಾಲ ಆಸ್ಪತ್ರೆ ತೋರಿಸಿಕೊಟ್ಟಿದೆ. ಈ ಮೂಲಕ ವಿಶ್ವದರ್ಜೆಯ ಶಸ್ತ್ರಚಿಕಿತ್ಸೆಯನ್ನು ಜನರ ಮನೆಬಾಗಿಲಿಗೆ ತರಲಾಗಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಾಹೆಯು ಭಾರತದ ಅಗ್ರ 10 ವಿ.ವಿ.ಗಳಲ್ಲೊಂದಾಗಿದೆ, ಇದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಗುಣಮಟ್ಟವೇ ಕಾರಣ. ಮಾಹೆಯ ಆಸ್ಪತ್ರೆಗಳು ತೀರಾ ಬಡವನಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಬದ್ಧವಾಗಿದೆ. ಅದೇ ಕಾರಣಕ್ಕೆ ಈ ರೋಬೋಟಿಕ್ ಸರ್ಜರಿ ಕೇಂದ್ರ ಆರಂಭಿಸಲಾಗಿದೆ ಎಂದರು.ರೋಬೋಟಿಕ್ ಕೇಂದ್ರದಲ್ಲಿರುವ ಸೌಲಭ್ಯಗಳ ಬಗ್ಗೆ ಆಸ್ಪತ್ರೆಯ ಸರ್ಜಿಕಲ್ ಆಂಕೋಲಜಿ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್, ಕೀಲು ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆ ಬಗ್ಗೆ ಮಾಹೆಯ ಸಹಉಪಕುಲಪತಿ ಡಾ. ಶರತ್ ಕೆ. ರಾವ್ ಮಾಹಿತಿ ನೀಡಿದರು. ಮಣಿಪಾಲ ಆಸ್ಪತ್ರೆಗಳ ಮಂಗಳೂರು ಪ್ರಾದೇಶಿಕ ಮುಖ್ಯ ಅಧಿಕಾರಿ ಸಘೀರ್ ಸಿದ್ದಿಕಿ ವೇದಿಕೆಯಲ್ಲಿದ್ದರು. ಮಾಹೆ ಮಣಿಪಾಲ ಸಿಓಓ ಡಾ. ಸುಧಾಕರ ಕಂಟಿಪುಡಿ ಸ್ವಾಗತಿಸಿದರು, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು.
.................ನಿಖರ ಶಸ್ತ್ರಚಿಕಿತ್ಸೆ, ಶೀಘ್ರ ಚೇತರಿಕೆಈ ರೋಬೋಟಿಕ್ ಕೇಂದ್ರವು ಅಂಕೋಲಜಿ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಜೆಐ ಶಸ್ತ್ರಚಿಕಿತ್ಸೆ, ಒಬಿಜಿ, ಮೂತ್ರಶಾಸ್ತ್ರ ಚಿಕಿತ್ಸೆ ಹಾಗೂ ಮೊಣಕಾಲು ಮತ್ತು ಕೀಲುಗಳ ಶಸ್ತ್ರಚಿಕಿತ್ಸೆಯಲ್ಲಿ ನಿಖರತೆ ಹೆಚ್ಚಿಸಲಿದೆ. ರಕ್ತ ಹರಿಯುವಿಕೆ ಕಡಿಮೆ ಮಾಡುತ್ತದೆ, ಸಮಯವನ್ನು ಉಳಿಸುತ್ತದೆ, ಫಲಿತಾಂಶ ಹೆಚ್ಚಿಸುತ್ತದೆ, ಇದರಿಂದ ರೋಗಿಯ ಚೇತರಿಕೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಯೂ ಶೀಘ್ರವಾಗುತ್ತದೆ, ಚಿಕಿತ್ಸಾ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು.