ಫೆ.11ರಂದು ಮಣಿಪಾಲ್ ಮ್ಯಾರಥಾನ್, 15 ಸಾವಿರ ಓಟಗಾರರ ನಿರೀಕ್ಷೆ

| Published : Oct 06 2023, 01:21 AM IST

ಫೆ.11ರಂದು ಮಣಿಪಾಲ್ ಮ್ಯಾರಥಾನ್, 15 ಸಾವಿರ ಓಟಗಾರರ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

21.10 ಕಿ.ಮೀ. ಹಾಫ್ ಮ್ಯಾರಥಾನ್ ಗಳಲ್ಲಿ ವಿಜೇತರಿಗೆ 15 ಲಕ್ಷ ರು.ಗೂ ಹೆಚ್ಚು ಮೊತ್ತದ ಬಹುಮಾನ
ಕನ್ನಡಪ್ರಭ ವಾರ್ತೆ ಮಣಿಪಾಲ ಕಳೆದ 6 ವರ್ಷಗಳಿಂದ ನಡೆಯುತ್ತಿರುವ ಮಣಿಪಾಲ ಮ್ಯಾರಾಥಾನ್ ಇದೀಗ ರಾಷ್ಟ್ರೀಯ ಮ್ಯಾರಾಥಾನ್ ಸರ್ಕ್ಯೂಟ್‌ನಲ್ಲಿ ಸ್ಥಾನ ಪಡೆದಿದ್ದು, ಇದರಲ್ಲಿ ವಿದೇಶದ ಓಟಗಾರರು ಭಾಗವಹಿಸಲಿದ್ದಾರೆ ಎಂದು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ. ಅವರು ಶುಕ್ರವಾರ ಮಣಿಪಾಲ್ ಮ್ಯಾರಥಾನ್‌ನ 6ನೇ ಆವೃತ್ತಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2024ರ ಫೆ.11ರಂದು ಮಣಿಪಾಲ ಮ್ಯಾರಾಥಾನ್ ನಡೆಯಲಿದ್ದು, ಈ ಬಾರಿ 15,000 ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಈ ಹಿಂದಿನ ಮ್ಯಾರಥ್ಯಾನ್‌ನಲ್ಲಿ ಇಥಿಯೋಪಿಯಾ, ಕೀನ್ಯಾ, ಇಂಗ್ಲೆಂಡ್, ನೇಪಾಲ, ಮಲೇಷ್ಯಾ, ಅಮೆರಿಕಾ ಮತ್ತು ಶ್ರೀಲಂಕಾದ ಓಟಗಾರರು ಭಾಗವಹಿಸಿದ್ದರು. ಈ ಬಾರಿ ಇನ್ನೂ ಹೆಚ್ಚಿನ ದೇಶಗಳು ಭಾಗವಹಿಸಲಿವೆ ಎಂದರು. ಪುರುಷರ ಮತ್ತು ಮಹಿಳೆಯರ ವಿವಿಧ ವಯೋಮಾನಗಳಲ್ಲಿ 42.20 ಕಿ.ಮೀ. ಫುಲ್ ಮ್ಯಾರಥಾನ್, 21.10 ಕಿ.ಮೀ. ಹಾಫ್ ಮ್ಯಾರಥಾನ್ ಗಳಲ್ಲಿ ವಿಜೇತರಿಗೆ ಸುಮಾರು 15 ಲಕ್ಷ ರು.ಗೂ ಹೆಚ್ಚು ಮೊತ್ತದ ಬಹುಮಾನವನ್ನು ನೀಡಲಾಗುವುದು ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹೆಯ ಉಪಕುಲಪತಿ ಡಾ.ಎಂ.ಡಿ.ವೆಂಕಟೇಶ್, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕೆಂಪರಾಜ್ ಮತ್ತು ರಾಜ್ಯ ಸಂಘದ ಉಪಾಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು. ಬಾಕ್ಸ್ ನಾವು ನಿಮ್ಮೊಂದಿಗೆ ಸದಾ ಇದ್ದೇವೆ: ಘೋಷವಾಕ್ಯ ಈ ಬಾರಿಯ ಮ್ಯಾರಥಾನ್‌ಗೆ, ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಎಂಬ ಉದಾತ್ತ ಧ್ಯೇಯವನ್ನು ಬೆಂಬಲಿಸುವ ಉದ್ದೇಶದೊಂದಿಗೆ, ನಾವು ನಿಮ್ಮೊಂದಿಗೆ ಸದಾ ಇದ್ದೇವೆ ಎಂಬ ಘೋಷವಾಕ್ಯವನ್ನು ಆರಿಸಲಾಗಿದೆ. ಈ ಮೂಲಕ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ಜೀವಗಳ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವುದು ಉದ್ದೇಶವಾಗಿದೆ ಎಂದು ಆಸ್ಪತ್ರೆಯ ಉಪಶಾಮಕ ಆರೈಕೆ ಕೇಂದ್ರದ ಮುಖ್ಯಸ್ಥ ಡಾ.ನವೀನ್ ಸಾಲಿನ್ಸ್ ಹೇಳಿದರು.