ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ತರಬೇಕೆಂದು ಒತ್ತಾಯಿಸಿ ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ರಾಜ್ಯ ಪಿಂಚಣಿ ಯೋಜನೆ ಎಂಪಿಎಸ್ ಸಂಬಂಧಿತ ಸಂಘಟನೆಗಳ ಸಭೆಯಲ್ಲಿ ಪಾಲ್ಗೊಂಡ ಅವರು ಪಿಂಚಣಿ ಯೋಜನೆಯ ಸಾಧಕ ಬಾಧಕಗಳ ಕುರಿತು ವಿವರಿಸಿದರು.ಹಳೆಯ ಪಿಂಚಣಿ ಯೋಜನೆಯನ್ನು 2006 ಏ.1 ರಂದು ಅಂದಿನ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ರದ್ದು ಮಾಡಿತು. 2006 ಮಾ.31ಕ್ಕಿಂತ ಮೊದಲು ನೇಮಕಾತಿಯಾದ ಖಾಸಗಿ ಅನುದಾನಿತ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆ ಈಗಲೂ ಅನ್ವಯವಾಗುತ್ತಿದೆ. ಆದರೆ 2006 ಏ.1 ರ ನಂತರ ಅನುಮೋದನೆ ಪಡೆದವರಿಗೆ ಹಳೆಯ ಪಿಂಚಣಿ ಯೋಜನೆ ರದ್ದಾಗಿದ್ದು, ಹೊಸ ಪಿಂಚಣಿ ಯೋಜನೆ ಕೂಡ ಅನ್ವಯವಾಗದೇ ಇರುವುದು ದೊಡ್ಡ ದುರಂತ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಂಜುನಾಥ್ ಕುಮಾರ್ ಅಭಿಪ್ರಾಯ ಹಂಚಿಕೊಂಡರು.
ಸರ್ಕಾರಿ ಎಂಪಿಎಸ್ ನೌಕರರ ಭತ್ಯೆ ಶೇ.10, ಸರ್ಕಾರದ ವಂತಿಗೆ ಶೇ.14ರಷ್ಟು ಮತ್ತು ಶೇ.24 ಮೊತ್ತವನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ಶೇರು ಮಾರುಕಟ್ಟೆಗೆ ಹಾಕಲಾಗುತ್ತದೆ. ಅದರಲ್ಲಿ ಎಸ್‌ಬಿಐ ಶೇ.40 ರಷ್ಟು, ಯುಟಿಐ ಶೇ.17, ಎಲ್‌ಐಸಿಗೆ ಶೇ.46 ರಷ್ಟು ಹಣವನ್ನು ವಿನಿಯೋಗಿಸಿದ್ದು, ಕೇಂದ್ರ ಸರ್ಕಾರ ಆ ಹಣವನ್ನು ಮರುಪಾವತಿಸಬೇಕು ಮತ್ತು ಎಂಪಿಎಸ್ ಪದ್ಧತಿ ರದ್ದು ಮಾಡಬೇಕು ಎಂದು ಮನವಿ ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಕುಮಾರ್ ಎಂಪಿಎಸ್ ರದ್ದು ಮತ್ತು ಒಪಿಎಸ್ ಮರು ಜಾರಿ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿರುವುದಾಗಿ ತಿಳಿಸಿದರು.