ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಮೀನುಗಾರ ಸಮುದಾಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಾಡಿರುವ ಅನ್ಯಾಯವಾಗಿದೆ ಎಂದು ಮೀನುಗಾರ ಮುಖಂಡರು ಹೇಳಿದ್ದಾರೆ.
ಕಾರವಾರ: ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಮೀನುಗಾರ ಸಮುದಾಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಾಡಿರುವ ಅನ್ಯಾಯವಾಗಿದೆ ಎಂದು ಮೀನುಗಾರ ಮುಖಂಡ ಜೈವಿಠ್ಠಲ ಕುಬಾಲ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ತನ್ನ ನಿರ್ಧಾರ ಮರುಪರಿಶೀಲಿಸಿ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರ ಸಮುದಾಯದಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು. ಜಾತಿವಾರು ಸಮೀಕರಣದ ಆಧಾರದ ಮೇಲೆ ಸಚಿವ ಸಂಪುಟ ರಚಿಸಲಾಗಿದ್ದರೂ ಮೀನುಗಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದು ಸಮುದಾಯ ಹಾಗೂ ಜಿಲ್ಲೆಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದರು.ಮಂಕಾಳ ವೈದ್ಯ ಅವರ ಹೆಸರನ್ನು ಸಚಿವರ ಪಟ್ಟಿಗೆ ಹೆಸರು ಸೇರಿಸಿ, ಆನಂತರ ಕೈಬಿಟ್ಟಿರುವುದು ಮೀನುಗಾರ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದು, ಸರ್ಕಾರ ಕೂಡಲೇ ಈ ತಪ್ಪನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಜಗದೀಶ ಹರಿಕಾಂತ, ವೈದ್ಯ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಮೀನುಗಾರ ಸಮುದಾಯಕ್ಕೆ ಮಾಡಿರುವ ಅನ್ಯಾಯವಾಗಿದೆ. ಸರ್ಕಾರ ಈ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಬಾಬು ಕುಬಾಲ್, ಮಂಕಾಳು ವೈದ್ಯರು ಮೀನುಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ ಮೀನುಗಾರರ ವಿಮೆ, ಸೀಮೆಎಣ್ಣೆ, ಡೀಸೆಲ್ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದರು. ಮೀನುಗಾರಿಕೆ ಸಂದರ್ಭದಲ್ಲಿ ಮೃತಪಟ್ಟವರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ₹10 ಲಕ್ಷಕ್ಕೆ ಹೆಚ್ಚಿಸಿದ್ದರು. ಇಂತಹ ನಾಯಕನಿಗೆ ಸಚಿವ ಸ್ಥಾನ ನಿರಾಕರಿಸಿರುವುದನ್ನು ಕರಾವಳಿ ಭಾಗದ ಮೀನುಗಾರರು ಪಕ್ಷಾತೀತವಾಗಿ ಖಂಡಿಸುತ್ತಿದ್ದಾರೆ ಎಂದರು.
ಪ್ರಮುಖರಾದ ರಾಜು ಹರಿಕಾಂತ, ಮಂಜುನಾಥ ಹರಿಕಾಂತ, ಮಹಾಬಲೇಶ್ವರ ಅಂಬಿಗ, ಗಣೇಶ ಅಂಬಿಗ, ಗಂಗಾಧರ ಅಂಬಿಗ, ಚಿದಾನಂದ ಲಕ್ಕುಮನೆ, ಬೀರಪ್ಪ ಹರಿಕಾಂತ, ವೆಂಕಟರಮಣ ಮೊಗೇರ, ಯಾದವ ಮೊಗೇರ, ಕೇಶವ ಮೊಗೇರ, ಗೋಪಾಲ ಮೊಗೇರ, ಈಶ್ವರ ಮೊಗೇರ ಹಾಗೂ ಗೋವರ್ಧನ ಮೊಗೇರ ಮತ್ತಿತರರು ಇದ್ದರು.