ಸಾರಾಂಶ
ಹಾಸನ: ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೃಹತ್ ಭಾವಚಿತ್ರವನ್ನಿಟ್ಟು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಜವರೇಗೌಡ ಮಾತನಾಡಿ, ದೇಶದ ಅತ್ಯಂತ ಸರಳ, ಪ್ರಾಮಾಣಿಕ ವ್ಯಕ್ತಿಯಾಗಿ ಹಾಗೂ ದೇಶವು ಪ್ರಪಂಚದ ಎಲ್ಲಾ ಕಡೆ ಆರ್ಥಿಕವಾಗಿ ಶಕ್ತಿಯುತ ಬೆಳವಣಿಗೆಯಾಗಿದೆ ಎಂಬುದಕ್ಕೆ ಮೂಲ ಕಾರಣ ಮನಮೋಹನ್ ಸಿಂಗ್. ಸರ್ಕಾರದ ಸವಲತ್ತುಗಳನ್ನು ಯಾವುದೇ ಸಂದರ್ಭ ಬಂದರೂ ಸ್ವಂತಕ್ಕೆ ಬಳಕೆ ಮಾಡಬಾರದೆಂಬುದನ್ನು ಕಾಯ, ವಾಚ, ಮನಸಾ ನಡೆಸಿಕೊಂಡು ಬಂದವರು. ಮನಮೋಹನ್ ಸಿಂಗ್ ಅವರು ಒಂದು ಸಾಮಾನ್ಯ ಕುಟುಂಬದಿಂದ ಬಂದವರು. ಆ ಕಾಲದಲ್ಲಿ ಕರೆಂಟ್ ಇಲ್ಲದೇ ಸೀಮೆಎಣ್ಣೆ ದೀಪದಲ್ಲಿ ಓದುತ್ತಿದ್ದವರು. ಅಲ್ಲಿಂದ ಬಂದು ವಿದ್ಯಾಭ್ಯಾಸ ಮಾಡಿ ಪ್ರೊಫೆಸರ್ ಆಗಿ, ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅದರಲ್ಲೂ ಆರ್ಥಿಕ ಸಲಹೆಗಾರರಾಗಿ, ವಿಶ್ವ ಬ್ಯಾಂಕಿನಲ್ಲಿ ಸಲಹೆಗಾರರಾಗಿ, ಯುವಜನ ಆಯೋಗದ ಉಪಾಧ್ಯಕ್ಷರಾಗಿ ಜೊತೆಗೆ 1991ರಲ್ಲಿ ದೇಶ ಆರ್ಥಿಕವಾಗಿ ತುಂಬ ಹೀನಾಯ ಸ್ಥಿತಿಯಲ್ಲಿ ಇದ್ದ ವೇಳೆ ಚಿನ್ನವನ್ನು ಅಡ ಇಡುವ ವೇಳೆ ಟಿ.ವಿ. ನರಸಿಂಹರಾವ್ ಅವರು ಎಲ್ಲರನ್ನು ಹುಡುಕಿದರು. ಈ ದೇಶವನ್ನು ಮತ್ತು ಈ ಸರ್ಕಾರವನ್ನು ಉಳಿಸಬೇಕಾದರೇ ಮನ ಮೋಹನ್ ಸಿಂಗ್ ಅವಶ್ಯಕತೆ ಇದೆ ಎಂದರು.
ನರಸಿಂಹ ರಾವ್‌ರಂತೆ ಸರಳವಾಗಿ ಬಂದಂತಹವರು ಹಾಗೂ ಈ ದೇಶಕ್ಕೆ ಉದಾರೀಕರಣ ನೀತಿಯನ್ನು ಅನುಸರಿಸಿದರ ಕಾರಣ ಪ್ರಪಂಚ ಭಾರತದ ಕಡೆ ನೋಡುವಂತಾಗಿದೆ. ಇವತ್ತು ಏನಾದರೂ ಆರ್ಥಿಕವಾಗಿ ಈ ಸ್ಥಿತಿಯಲ್ಲಿದ್ದರೆ ಮತ್ತು ನಾವು ಉನ್ನತ ಸ್ಥಿತಿಗೆ ಹೋಗಿದ್ದರೇ ಅದಕ್ಕೆ ಕಾಣಕರ್ತರು ಮನಮೋಹನ್ ಸಿಂಗ್ ಎಂದು ಬಣ್ಣಿಸಿದರು.ರಾಜಕಾರಣಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ ಮನಮೋಹನ್ ಸಿಂಗ್‌ರಂತೆ ಜೀವನ ಮಾಡಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಆಸ್ತಿಗಳನ್ನು, ಸವಲತ್ತುಗಳನ್ನು ಯಾವುದೇ ಸಂದರ್ಭ ಬಂದರೂ ದುರುಪಯೋಗ ಮಾಡಿಕೊಂಡಿರುವುದಿಲ್ಲ. ಆದರೇ ಇವತ್ತಿನ ಸ್ಥಿತಿಯೇ ಬೇರೆ ಇದೆ. ಮನಮೋಹನ್ ಸಿಂಗ್ ಎಂದರೇ ನಮಗೆ ಆದರ್ಶವಾದ ನಾಯಕರು. ಮನಮೋಹನ್ ಸಿಂಗ್ ಅಂತವರು ಅನೇಕ ಜನರು ಹುಟ್ಟಿ ಬರಬೇಕು ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ರಘು ದಾಸರಕೊಪ್ಪಲು, ಕಾಂಗ್ರೆಸ್ ಮುಖಂಡರಾದ ಎಚ್.ಪಿ. ಮೋಹನ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಶರ್ಮ, ನಗರಸಭೆ ಮಾಜಿ ಸದಸ್ಯ ಅಬ್ದುಲ್ ಕಯಿಂ, ವಕೀಲರಾದ ಜಯರಾಂ, ವಿಶ್ವನಾಥ್, ಚಂದ್ರಶೇಖರ್, ರಾಮಚಂದ್ರ, ಲವಕುಮಾರ್, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.