ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದೇಶದ ಅರ್ಥಶಾಸ್ತ್ರಜ್ಞ, ೧೦ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶವನ್ನು ಆರ್ಥಿಕವಾಗಿ ಬಲಾಢ್ಯಗೊಳಿಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ರವರ ಸಾವಿನ ಹಿನ್ನೆಲೆಯಲ್ಲಿ ಪಟ್ಟಣದ ಕೆ.ಆರ್.ವೃತ್ತದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದಿಂದ ಸಂತಾಪ ಸಭೆ ನಡೆಸಲಾಯಿತು.ಕೆ.ಆರ್.ವೃತ್ತದಲ್ಲಿ ನಡೆಸಲಾದ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಮನಮೋಹನ್ ಸಿಂಗ್‌ರವರು ದೇಶದ ಅರ್ಥ ವ್ಯವಸ್ಥೆಯನ್ನು ನಿಭಾಯಿಸಿದ ರೀತಿ ನೋಡಿ ಪಾಶ್ಚಿಮಾತ್ಯ ದೇಶಗಳೇ ಬೆರಗಾಗಿದ್ದವು. ದೊಡ್ಡಣ್ಣ ಅಮೆರಿಕಾದ ಆಗಿನ ಅಧ್ಯಕ್ಷ ಬರಾಕ್ ಒಬಮಾ ತಮ್ಮ ದೇಶದ ಆರ್ಥಿಕ ವ್ಯವಸ್ಥೆ ಸದೃಢಗೊಳಿಸಲು ಸಿಂಗ್‌ರವರ ಸಲಹೆ ಕೇಳಿದ್ದುಂಟು. ಅವರ ಆದರ್ಶ ಬದುಕು ಮುಂದಿನ ಜನರಿಗೆ ಆದರ್ಶಪ್ರಾಯವಾಗಿರಲಿ, ದೇಶದೆಲ್ಲೆಡೆ ಅವರ ಸ್ಮರಣಾರ್ಥ ಕಾರ್ಯಗಳು ನಡೆಯುತ್ತಿದ್ದು, ಅವರು ಅಗಲಿದ್ದರೂ ಅವರ ಆದರ್ಶ, ಅಭಿವೃದ್ಧಿ ಬದುಕು ನಮ್ಮ ಕಣ್ಮುಂದೆ ಇವೆ. ಅವರ ಆತ್ಮಕೆ ಶಾಂತಿ ಸಿಗಲಿ, ಅವರ ನೆನಪು ಈ ದೇಶದಲ್ಲಿ ಸಾವಿರಾರು ವರ್ಷಗಳು ಇರಲಿ ಎಂದು ಆಶಿಸಿದರು.
ಮುಖಂಡ ಸಿ.ಎಸ್.ಯುವರಾಜ್ ಮಾತನಾಡಿ, ದೇಶವನ್ನು ಆರ್ಥಿಕ ಬಲಿಷ್ಠಗೊಳಿಸುವ ಮೂಲಕ ಸುಭದ್ರಗೊಳಿಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ ವೇಳೆ ದೇಶದ ಚುಕ್ಕಾಣಿ ಹಿಡಿದು ದೇಶದ ಅರ್ಥವ್ಯವಸ್ಥೆಯನ್ನೇ ಗಟ್ಟಿಗೊಳಿಸಿದರು. ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿಗಳು ನಿರ್ಮಾಣವಾಗಲು ಮನಮೋಹನ್ ಸಿಂಗ್ ಕಾರಣರು. ನರೇಗಾದ ಮೂಲಕ ಪ್ರತಿ ಹಳ್ಳಿಯ ಜನಕೆ ಸಂಬಳದ ರೀತಿ ಹಣ ಕೊಟ್ಟವರು, ಆಹಾರ ಭದ್ರತೆ ಕಾಯ್ದೆ ಜಾರಿ ಮೂಲಕ ದೇಶದ ೧೨೦ ಕೋಟಿ ಜನರಿಗೆ ಆಹಾರ ನೀಡಿದವರು, ಇವರ ಆದರ್ಶ ಗುಣಗಳು ರಾಜಕೀಯದ ಕನಸು ಕಾಣುವ ನಮ್ಮಂಥ ಯುವಕರಿಗೆ ದಾರಿದೀಪವಾಗಿದೆಯೆಂದರು.ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ಮಾತನಾಡಿ, ಡಾ.ಮನಮೋಹನ್ ಪ್ರಧಾನಿಯಾಗಿದ್ದಾಗ ಬಡವರಿಗೆ ಆರ್ಥಿಕವಾಗಿ ನೆರವಾಗುವ ನರೇಗಾ ಯೋಜನೆ ಜಾರಿಗೆ ತಂದವರು, ಮಾಹಿತಿ ಹಕ್ಕು ಅಧಿನಿಯಮ, ಕಡ್ಡಾಯ ಶಿಕ್ಷಣ ನೀತಿ, ಆಹಾರ ಭದ್ರತೆ, ಪರಮಾಣು ನಾಗರಿಕ ಒಪ್ಪದಂತಹ ಕಾರ್ಯಕ್ರಮಗಳನ್ನು ರೂಪಿಸಿ ದೇಶಕ್ಕೆ ಉತ್ತಮ ಪ್ರಧಾನಿಯಾಗಿ ವಿಶ್ವಕ್ಕೆ ಮಾದರಿಯಾಗಿದ್ದವರು. ಇವರೀಗ ಸಾವನ್ನಪ್ಪಿದ್ದು ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು. ಮುಖಂಡರಾದ ದೊಡ್ಡೇರಿ ಶ್ರೀಕಂಠ, ಸಿ. ಜಿ. ರವಿ, ಎಂ.ಕೆ.ಮಂಜೇಗೌಡ ಮಾತನಾಡಿದರು.
ಈ ವೇಳೆ ಜಿ.ಪಂ.ಮಾಜಿ ಸದಸ್ಯ ಎನ್.ಡಿ.ಕಿಶೋರ್, ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ನುಗ್ಗೇಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಕಿರಣ್, ಪುರಸಭಾ ಸದಸ್ಯರಾದ ಆದರ್ಶ, ಇಲಿಯಾಸ್, ಉಮಾಶಂಕರ್, ರವಿ, ಮುಖಂಡರಾದ ಅಶೋಕ್, ಕಬ್ಬಾಳು ಸುರೇಶ್, ಜಗದೀಶ್ ಸೇರಿ ಇತರರು ಇದ್ದರು.