ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ಭಾನುವಾರ (ಫೆ.೨)ರಂದು ಚುನಾವಣೆ ನಡೆಯಲಿದೆ. ನಗರದ ಸ್ವರ್ಣಸಂದ್ರದಲ್ಲಿರುವ ಮೈಷುಗರ್ ಪ್ರೌಢ ಶಾಲೆಯಲ್ಲಿ ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆಯೇ ಫಲಿತಾಂಶ ಪ್ರಕಟವಾಗಲಿದ್ದು, ಕಣದಲ್ಲಿರುವ ೨೬ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಒಕ್ಕೂಟದ ವ್ಯಾಪ್ತಿಯಲ್ಲಿ ೧೦೭೮ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಹಳೆಯ ಆಡಳಿತ ಮಂಡಳಿಯಲ್ಲಿದ್ದ ೧೨ ಜನರಲ್ಲಿ ಶೀಳನೆರೆ ಅಂಬರೀಶ್ ಹೊರತುಪಡಿಸಿ ಉಳಿದವರೆಲ್ಲರೂ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಮನ್‌ಮುಲ್ ಚುನಾವಣೆ ಸಹಕಾರ ಕ್ಷೇತ್ರದ ಚುನಾವಣೆಯಾಗಿದ್ದು, ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳು ಸ್ಪರ್ಧಿಸದಿದ್ದರೂ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ಗೆ ಅಧಿಕಾರ ಉಳಿಸಿಕೊಳ್ಳುವ ಪ್ರತಿಷ್ಠೆಯಾದರೆ, ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಜೆಡಿಎಸ್‌ಗೆ ಸವಾಲಾಗಿದೆ.ಕಳೆದ ಅವಧಿಯಲ್ಲಿ ಮೊದಲಿಗೆ ಜೆಡಿಎಸ್‌ನಿಂದ ಬಿ.ಆರ್.ರಾಮಚಂದ್ರ ಹಾಗೂ ಎರಡನೇ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಬಿ.ಬೋರೇಗೌಡ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಈಗ ಮನ್‌ಮುಲ್ ಅಧ್ಯಕ್ಷರಾಗುವ ಆಕಾಂಕ್ಷೆಯೊಂದಿಗೆ ಪ್ರಭಾವಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಧ್ಯಕ್ಷ ಸ್ಥಾನ ಅಲಂಕರಿಸುವ ಗುರಿಯೊಂದಿಗೆ ಕದನ ಕಣ ಪ್ರವೇಶಿಸಿ ಹಳೆಯ ಹುಲಿಗಳ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.
ಜೆಡಿಎಸ್‌ಗೆ ಸೋಲುಣಿಸಲು ಕಾಂಗ್ರೆಸ್ ಪಣತೊಟ್ಟಿದೆ. ಗೆಲುವಿಗೆ ನಾನಾ ರೀತಿಯ ಪಟ್ಟುಗಳನ್ನು ಹಾಕುತ್ತಾ ತಂತ್ರಗಾರಿಕೆ ನಡೆಸಿದೆ. ಅದಕ್ಕೆ ಸರಿಸಾಟಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದವರೂ ಪ್ರತಿತಂತ್ರ ಹೆಣೆಯುತ್ತಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅಂತಿಮವಾಗಿ ಜಯ ಯಾರಿಗೆ ಎನ್ನುವುದು ಭಾನುವಾರ ನಿರ್ಧಾರವಾಗಲಿದೆ.ಕಣದಲ್ಲಿರುವ ಅಭ್ಯರ್ಥಿಗಳು:ಮಂಡ್ಯ ತಾಲೂಕಿನ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಯು.ಸಿ.ಶಿವಕುಮಾರ್, ಕೆ.ರಾಜು, ವಿಜಯಕುಮಾರ್, ಮದ್ದೂರು ತಾಲೂಕಿನಿಂದ ಎಸ್.ಪಿ.ಸ್ವಾಮಿ, ಎಂ.ರೂಪಾ, ಕದಲೂರು ರಾಮಕೃಷ್ಣ ಬಿ.ಅನಿಲ್‌ಕುಮಾರ್, ಎಸ್.ಮಹೇಶ, ಎಂ.ಕೆ.ಹರೀಶ್‌ಬಾಬು, ಮಳವಳ್ಳಿ ತಾಲೂಕಿನ ವಿ.ಎಂ.ವಿಶ್ವನಾಥ್, ಡಿ.ಕೃಷ್ಣೇಗೌಡ, ಪಾಂಡವಪುರ ತಾಲೂಕಿನ ಕೆ.ರಾಮಚಂದ್ರ, ಸಿ.ಶಿವಕುಮಾರ, ಶ್ರೀರಂಗಪಟ್ಟಣದ ಬಿ.ಬೋರೇಗೌಡ, ಎಂ.ಕಿಶೋರ್ (ಕಿರಣ್), ಎಚ್.ಎಂ.ಪುಟ್ಟಸ್ವಾಮಿಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಶಾಸಕ ಎಚ್.ಟಿ.ಮಂಜು, ಕೆ.ರವಿ, ಎನ್.ಎಸ್.ಮಹೇಶ, ಎಂ.ಬಿ.ಹರೀಶ್, ನಾಗಮಂಗಲ ತಾಲೂಕಿನಿಂದ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ನೆಲ್ಲೀಗೆರೆ ಬಾಲು, ದೇವೇಗೌಡ.
ಮನ್‌ಮುಲ್ ನಿರ್ದೇಶಕ ಸ್ಥಾನಗಳು, ಮತದಾರರುತಾಲೂಕು ನಿರ್ದೇಶಕ ಸ್ಥಾನ ಮತದಾರರು
ಮಂಡ್ಯ ೦೩ ೧೯೬ಮದ್ದೂರು ೦೨ ೧೬೬
ಕೆ.ಆರ್.ಪೇಟೆ ೦೨ ೨೦೪ನಾಗಮಂಗಲ ೦೨ ೨೩೧
ಮಳವಳ್ಳಿ ೦೧ ೧೦೦ಪಾಂಡವಪುರ ೦೧ ೧೨೪
ಶ್ರೀರಂಗಪಟ್ಟಣ ೦೧ ೫೭ಒಟ್ಟು ೧೨ ೧೦೭೮
ಚುನಾವಣಾ ಪ್ರದೇಶದ ಸುತ್ತ ನಿಷೇಧಮಂಡ್ಯ: ನಗರದ ಸ್ವರ್ಣಸಂದ್ರದ ಮೈಷುಗರ್ ಪ್ರೌಢಶಾಲೆಯಲ್ಲಿ ಭಾನುವಾರ (ಫೆ.2)ರಂದು ಮನ್‌ಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಲಾ ಕಾಂಪೌಂಡ್‌ನಿಂದ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ಪ್ರದೇಶದ ಸುತ್ತ-ಮುತ್ತ ಮದುವೆ, ಶವಸಂಸ್ಕಾರ ಕಾರ್ಯಗಳಿಗೆ, ಧಾರ್ಮಿಕ ಕಾರ್ಯಗಳಿಗೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ನೇಮಿಸಲ್ಪಟ್ಟಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ಚುನಾವಣಾ ಕಾರ್ಯನಿರತ ಅಧಿಕಾರಿ-ಸಿಬ್ಬಂದಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಆದೇಶದಲ್ಲಿ ತಿಳಿಸಿದ್ದಾರೆ.