ಮನ್‌ಮುಲ್ ಚುನಾವಣೆ: ಐವರಿಂದ ನಾಮಪತ್ರ ಸಲ್ಲಿಕೆ

| Published : Jan 21 2025, 12:30 AM IST

ಸಾರಾಂಶ

ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳಾಗಿ ಮದ್ದೂರು ತಾಲೂಕಿನಿಂದ ರೂಪಾ ಹಾಗೂ ಮಹೇಶ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕದಲೂರು ರಾಮಕೃಷ್ಣ, ಹರೀಶ್‌ಬಾಬು, ಪಾಂಡವಪುರ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಿವಕುಮಾರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳಾಗಿ ಮದ್ದೂರು ತಾಲೂಕಿನಿಂದ ರೂಪಾ ಹಾಗೂ ಮಹೇಶ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕದಲೂರು ರಾಮಕೃಷ್ಣ, ಹರೀಶ್‌ಬಾಬು, ಪಾಂಡವಪುರ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಿವಕುಮಾರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಫೆ.೨ರಂದು ನಡೆಯುವ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಚುನಾವಣಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಉಮೇದುವಾರಿಕೆಗಳನ್ನು ಸಲ್ಲಿಸಿದರು.

ರೂಪಾ-ಮಹೇಶ್ ಶಕ್ತಿ ಪ್ರದರ್ಶನ:

ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ರೂಪಾ ಹಾಗೂ ಮಹೇಶ್ ಅವರು ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಶಾಸಕ ಕೆ.ಸುರೇಶ್‌ಗೌಡ ಹಾಗೂ ಅಪಾರ ಸಂಖ್ಯೆಯ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸುವುದರೊಂದಿಗೆ ತಮ್ಮ ಶಕ್ತಿ ಪ್ರದರ್ಶಿಸಿದರು.

ರೂಪಾ ಮತ್ತು ಮಹೇಶ್ ಅವರೇ ಎನ್‌ಡಿಎ ಬೆಂಬಲಿತ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ. ಇವರನ್ನು ಹೊರತುಪಡಿಸಿ ಮೈತ್ರಿಕೂಟದಿಂದ ಇನ್ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಸ್ಪಷ್ಟಪಡಿಸಿದರು.

ಬಿಜೆಪಿ ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್, ಮುಖಂಡರಾದ ವಿವೇಕ್, ಸಿ.ಟಿ. ಮಂಜುನಾಥ್, ಶ್ರೀಧರ್, ಮಲ್ಲಿಕಾರ್ಜುನ್, ಭೀಮೇಶ್, ಚಂದ್ರು ಸೇರಿದಂತೆ ಹಲವರು ಹಾಜರಿದ್ದರು.

ಕದಲೂರು ರಾಮಕೃಷ್ಣ ಮತ್ತೆ ಎಂಟ್ರಿ:

ಕಳೆದ ಮನ್‌ಮುಲ್ ಚುನಾವಣೆಯಲ್ಲಿ ರೂಪಾ ವಿರುದ್ಧ ಸೋಲನುಭವಿಸಿದ್ದ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಮತ್ತೆ ಮರು ಆಯ್ಕೆ ಬಯಸಿ ಅಖಾಡ ಪ್ರವೇಶಿಸಿದ್ದಾರೆ. ಈ ಬಾರಿ ಗೆಲುವು ಸಾಧಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದರೆ, ರೂಪಾ ಕೂಡ ಜೆಡಿಎಸ್ ಬೆಂಬಲದೊಂದಿಗೆ ಎರಡನೇ ಬಾರಿಗೆ ಮನ್‌ಮುಲ್ ಆಡಳಿತ ಮಂಡಳಿ ಪ್ರವೇಶಿಸುವುದಕ್ಕೆ ಉತ್ಸುಕರಾಗಿದ್ದಾರೆ.

ಶಾಸಕ ಉದಯ್‌ ಸಂಬಂಧಿ ಅಖಾಡಕ್ಕೆ ಇನ್ನು ಶಾಸಕ ಕೆ.ಎಂ.ಉದಯ್ ಸಂಬಂಧಿ ಹರೀಶ್‌ಬಾಬು ಅವರೂ ಕೂಡ ಮೊದಲ ಬಾರಿಗೆ ಮನ್‌ಮುಲ್ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದರು. ಅದೇ ರೀತಿ ಪಾಂಡವಪುರ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಿವಕುಮಾರ್ ಉಮೇದುವಾರಿಕೆ ಸಲ್ಲಿಸಿದರು. ಇದುವರೆಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದ ಕಾಡೇನಹಳ್ಳಿ ರಾಮಚಂದ್ರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ಸಹೋದರನ ಮಗ ಶಿವಕುಮಾರ್‌ನನ್ನು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದ್ದಾರೆ.