ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಕೆ.ಆರ್.ಪೇಟೆ ಮತ್ತು ಮದ್ದೂರು ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ನಿರ್ದೇಶನದಂತೆ ಶುಕ್ರವಾರ ಪ್ರಕಟಿಸಲಾಗಿದೆ.ಒಕ್ಕೂಟದ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ಫೆ.೨ರಂದು ಚುನಾವಣೆ ನಡೆದು ನಾಲ್ಕು ತಾಲೂಕಿನ ಏಳು ಸ್ಥಾನಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿತ್ತು. ಉಳಿದ ಮೂರು ತಾಲೂಕುಗಳ ಐದು ಸ್ಥಾನಗಳ ಫಲಿತಾಂಶ ಘೋಷಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದೀಗ ಎರಡು ತಾಲೂಕಿನ ಕೆ.ಆರ್.ಪೇಟೆ, ಮದ್ದೂರು ಕ್ಷೇತ್ರದ ನಾಲ್ಕು ಸ್ಥಾನಗಳ ಫಲಿತಾಂಶ ಅಧಿಕೃತವಾಗಿ ಹೊರಬಿದ್ದಿದೆ.
ಕೆ.ಆರ್.ಪೇಟೆ ಕ್ಷೇತ್ರದ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಕೆ.ರವಿ- ೧೩೭ ಹಾಗೂ ಎಂ.ಬಿ.ಹರೀಶ್- ೧೨೩ ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಶಾಸಕ ಎಚ್.ಟಿ.ಮಂಜು ೭೫ ಹಾಗೂ ಎನ್.ಎಸ್.ಮಹೇಶ್-೬೦ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಯಾರೂ ಇಲ್ಲಿ ಕಣಕ್ಕಿಳಿದಿರಲಿಲ್ಲ.ಮದ್ದೂರು ಕ್ಷೇತ್ರದ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಹರೀಶ್‌ಬಾಬು- ೯೧ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ಪಿ.ಸ್ವಾಮಿ - ೭೧ ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಕದಲೂರು ರಾಮಕೃಷ್ಣ- ೫೫, ಜೆಡಿಎಸ್ ಬೆಂಬಲಿತ ಎಸ್.ಮಹೇಶ್- ೪೭, ಬಿಜೆಪಿ ಬೆಂಬಲಿತ ರೂಪಾ- ೨೮ ಹಾಗೂ ಪಕ್ಷೇತರ ಅನಿಲ್‌ಕುಮಾರ್- ೩ ಮತಗಳನ್ನು ಪಡೆದಿದ್ದಾರೆ.ಜೆಡಿಎಸ್ ಪಕ್ಷ ತೊರೆದಿಲ್ಲ: ಕೆ.ರವಿ
ಕೆ.ಆರ್.ಪೇಟೆ ತಾಲೂಕಿನಿಂದ ಮನ್‌ಮುಲ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಕೆ.ರವಿ ( ಡಾಲು ರವಿ) ಹಾಗೂ ಎಂ.ಬಿ. ಹರೀಶ್ ಅವರಿಗೆ ಚುನಾವಣಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಶುಕ್ರವಾರ ಪ್ರಮಾಣ ಪತ್ರ ವಿತರಿಸಿದರು.ನಂತರ ಮಾತನಾಡಿದ ಮನ್‌ಮುಲ್ ನಿರ್ದೇಶಕ ಕೆ. ರವಿ ಅವರು, ನಾವು ಜೆಡಿಎಸ್ ಪಕ್ಷದಲ್ಲೇ ಸಕ್ರಿಯವಾಗಿದ್ದೇವೆ. ಮನ್‌ಮುಲ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಶಾಸಕ ಎಚ್.ಟಿ.ಮಂಜು ಹಾಗೂ ನಮ್ಮ ನಡುವೆ ಚಾಲೆಂಜ್ ಇತ್ತು. ಶಾಸಕರ ಎದುರು ಚುನಾವಣೆ ನಡೆಯುವುದು ಎಷ್ಟು ಕಷ್ಟ ಅಂತ ಗೊತ್ತಿದೆ. ಇದಕ್ಕೆ ಮತದಾರರು ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೊಂದರೆ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನಮಗೆ ಸಹಾಯ ಮಾಡಿದ್ದಾರೆ ಅಷ್ಟೇ. ಸಹಕಾರ ಸಂಘದಲ್ಲಿ ರಾಜಕೀಯ ಬೇಡವೆಂದು ಬುದ್ದಿ ಹೇಳಿ ಒಕ್ಕೂಟವನ್ನು ಉಳಿಸಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದರು. ಶಾಸಕರು ಸ್ವಂತ ನಿರ್ಧಾರದಿಂದ ಚುನಾವಣೆಗೆ ಬಂದಿದ್ದರು ಎಂದು ತಿಳಿಸಿದರು.ಉಸ್ತುವಾರಿ ಸಚಿವರೊಂದಿಗೆ ವಿಶ್ವಾಸದಲ್ಲಿದ್ದೇವೆ:
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ, ಶಾಸಕರ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಸಚಿವ ಎನ್.ಚಲುವರಾಯಸ್ವಾಮಿ ಅವರ ಜೊತೆ ವಿಶ್ವಾಸದಲ್ಲಿದ್ದೇವೆ. ಡೇರಿ ಅಭಿವೃದ್ಧಿಗೆ ಸಹಕರಿಸುತ್ತೇವೆ. ರೈತರಿಗೆ ಒಳ್ಳೆಯದಾಗಬೇಕು ಎಂದರು. ಮನ್‌ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಇದ್ದರು.ಮಳವಳ್ಳಿ ಕ್ಷೇತ್ರದ ಫಲಿತಾಂಶಕ್ಕೆ ತಡೆ:
ಮಳವಳ್ಳಿ ತಾಲೂಕಿನ ಒಂದು ನಿರ್ದೇಶಕ ಸ್ಥಾನದ ಚುನಾವಣೆಯ ಫಲಿತಾಂಶ ಇನ್ನೂ ಪ್ರಕಟವಾಗಬೇಕಿದೆ. ಇದರ ವಿಚಾರಣೆಯನ್ನು ನ್ಯಾಯಾಲಯ ಏ.೧೭ಕ್ಕೆ ಮುಂದೂಡಿದೆ. ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣೇಗೌಡ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವಿಶ್ವನಾಥ್ ಸ್ಪರ್ಧಿಸಿದ್ದು, ಗೆಲುವಿಗೆ ಒಂದು ಮತದ ಅಂತರದಲ್ಲಿದೆ. ಹಾಲು ಉತ್ಪಾದಕರ ಸಂಘದ ಸದಸ್ಯರ ಮತದಾನದ ಹಕ್ಕಿನ ವಿಚಾರವಾಗಿ ವಿಚಾರಣೆ ನಡೆಯುತ್ತಿದ್ದು, ವಿಜಯಲಕ್ಷ್ಮೀ ಯಾರ ಪಾಲಾಗುವಳೋ ಕಾದುನೋಡಬೇಕಿದೆ.