ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಮೇ ೨೦ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದ್ದಾರೆ.ಒಕ್ಕೂಟದ ಆಡಳಿತ ಮಂಡಳಿಯ ೧೨ ನಿರ್ದೇಶಕ ಸ್ಥಾನಗಳಿಗೆ ಫೆ.೨ರಂದು ಚುನಾವಣೆ ನಡೆಸಲಾಗಿತ್ತು. ನ್ಯಾಯಾಲಯದ ಅಂತಿಮ ಆದೇಶದ ಪ್ರಕಾರ ಎಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ.
ಮಂಡ್ಯ ತಾಲೂಕಿನ ಮೂರು ಸ್ಥಾನಗಳಿಗೆ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಯು.ಸಿ.ಶಿವಕುಮಾರ್, ಮದ್ದೂರು ತಾಲೂಕಿನ ಎರಡು ಸ್ಥಾನಗಳಿಗೆ ಎಸ್.ಪಿ.ಸ್ವಾಮಿ, ಹರೀಶ್‌ಬಾಬು, ಕೆ.ಆರ್.ಪೇಟೆಯ ಎರಡು ಸ್ಥಾನಗಳಿಗೆ ಡಾಲು ರವಿ, ಎಂ.ಬಿ.ಹರೀಶ್, ನಾಗಮಂಗಲ ತಾಲೂಕಿನ ಎರಡು ಸ್ಥಾನಗಳಿಗೆ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಮಳವಳ್ಳಿ ತಾಲೂಕಿನ ಒಂದು ಸ್ಥಾನಕ್ಕೆ ಕೃಷ್ಣೇಗೌಡ, ಪಾಂಡವಪುರ ತಾಲೂಕಿನ ಒಂದು ಸ್ಥಾನಕ್ಕೆ ಸಿ.ಶಿವಕುಮಾರ್ ಹಾಗೂ ಶ್ರೀರಂಗಪಟ್ಟಣದ ಒಂದು ಸ್ಥಾನಕ್ಕೆ ಬಿ.ಬೊರೇಗೌಡ ಆಯ್ಕೆಯಾಗಿದ್ದರು.ಇದೀಗ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಮೇ ೨೦ರಂದು ದಿನಾಂಕ ನಿಗದಿಪಡಿಸಿದ್ದು, ಅಂದು ಬೆಳಗ್ಗೆ ೯ ಗಂಟೆಯಿಂದ ೧೧ ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಮಧ್ಯಾಹ್ನ ೧ ಗಂಟೆಗೆ ಆಡಳಿತ ಮಂಡಳಿ ಸಭೆ ಹಾಗೂ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆ ಬಳಿಕ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ನಾಮಪತ್ರ ವಾಪಸ್ ಪಡೆಯುವುದಕ್ಕೆ ೩೦ ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಅಂತಿಮವಾಗಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ರಹಸ್ಯ ಮತದಾನ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.೧೭ ಮಂದಿ ಮತದಾರರು:
ಮನ್‌ಮುಲ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಒಟ್ಟು ೧೭ ಮಂದಿಗೆ ಮತದಾನ ಮಾಡುವ ಅವಕಾಶವಿದೆ. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿತರಾದ ೧೨ ಮಂದಿ ನಿರ್ದೇಶಕರು, ತಲಾ ಒಬ್ಬೊಬ್ಬರಂತೆ ಸರ್ಕಾರದ ನಾಮ ನಿರ್ದೇಶಿತ ಸದಸ್ಯರು, ಮಂಡ್ಯ ಸಹಕಾರ ಸಂಘಗಳ ಉಪನಿಬಂಧಕರು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಪ್ರತಿನಿಧಿ, ಮಂಡ್ಯ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳದ ಪ್ರತಿನಿಧಿ ಸೇರಿ ೧೭ ಮಂದಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.ಕಾಂಗ್ರೆಸ್‌ಗೆ ಅಧಿಕಾರ ಖಚಿತ:
ಮನ್‌ಮುಲ್ ಅಧಿಕಾರ ಕಾಂಗ್ರೆಸ್ ವಶವಾಗುವುದು ಈಗಾಗಲೇ ಖಚಿತಪಟ್ಟಿದೆ. ಏಕೆಂದರೆ, ಒಕ್ಕೂಟದ ೧೨ ಸ್ಥಾನಗಳ ಪೈಕಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮೇಲ್ನೋಟಕ್ಕೆ ೫ ಸ್ಥಾನಗಳಲ್ಲಿ ಗೆದ್ದಿರುವಂತೆ ಕಂಡುಬಂದರೂ ಅಧಿಕೃತವಾಗಿ ಮೂವರು ಮಾತ್ರ ಇದ್ದಾರೆ. ಕೆ.ಆರ್.ಪೇಟೆಯ ಡಾಲು ರವಿ, ಎಂ.ಬಿ.ಹರೀಶ್ ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆಗಳಿವೆ. ಇವರನ್ನು ಹೊರತುಪಡಿಸಿ ೬ ಸ್ಥಾನಗಳಲ್ಲಿ ಮುಂದಿದೆ. ಜೊತೆಗೆ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಮತದಾನದ ಹಕ್ಕನ್ನು ಹೊಂದಿರುವ ಸರ್ಕಾರದ ಅಧಿಕಾರಿಗಳು ಕಾಂಗ್ರೆಸ್ ಪರ ಮತ ಚಲಾಯಿಸುವುದರಿಂದ ಕಾಂಗ್ರೆಸ್‌ಗೆ ಮನ್‌ಮುಲ್ ಅಧಿಕಾರ ಸುಲಭವಾಗಿ ಒಲಿಯುವುದು ನಿಚ್ಚಳವಾಗಿದೆ.ಯು.ಸಿ.ಶಿವಕುಮಾರ್-ಎನ್. ಅಪ್ಪಾಜಿಗೌಡ ನಡುವೆ ಪೈಪೋಟಿಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಂಡ್ಯ ತಾಲೂಕಿನ ಯು.ಸಿ. ಶಿವಕುಮಾರ್ ಮತ್ತು ನಾಗಮಂಗಲ ತಾಲೂಕಿನ ಎನ್.ಅಪ್ಪಾಜಿಗೌಡ ನಡುವೆ ಪೈಪೋಟಿ ಏರ್ಪಟ್ಟಿದೆ.ಯು.ಸಿ.ಶಿವಕುಮಾರ್ ಅವರು ಮೂರು ಬಾರಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರೆ, ಎನ್.ಅಪ್ಪಾಜಿಗೌಡ ಅವರು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಸಚಿವ ಎನ್.ಚಲುವರಾಯಸ್ವಾಮಿ ಅವರು ಎನ್.ಅಪ್ಪಾಜಿಗೌಡ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಲು ಕಾರಣರಾಗಿದ್ದಾರೆ. ಈಗ ಇಬ್ಬರ ಆಯ್ಕೆ ತಲೆನೋವಾಗಿಯೂ ಪರಿಣಮಿಸಿದೆ.ಚಲುವರಾಯಸ್ವಾಮಿ ಅವರಿಗೆ ಎನ್.ಅಪ್ಪಾಜಿಗೌಡರನ್ನು ಅಧ್ಯಕ್ಷರನ್ನಾಗಿ ಮಾಡುವ ಆಸೆ ಇದ್ದರೂ ಮೂರು ಬಾರಿ ಗೆದ್ದಿರುವ ಯು.ಸಿ.ಶಿವಕುಮಾರ್ ಅವರನ್ನು ಕೈಬಿಡುವುದಕ್ಕೂ ಆಗುತ್ತಿಲ್ಲ. ಇಬ್ಬರಿಗೂ ಸಮಾಧಾನವಾಗುವ ರೀತಿಯಲ್ಲಿ ಅಧಿಕಾರ ಹಂಚಿಕೆ ಮಾಡಿದರೂ ಮಾಡಬಹುದು. ಅದರಲ್ಲಿ ಮೊದಲ ಅವಧಿಗೆ ಅಧ್ಯಕ್ಷರಾಗುವವರು ಯಾರೆಂಬ ಬಗ್ಗೆ ಕುತೂಹಲವಿದೆ.