ಭಾನುವಾರ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವೀಕ್ಷಿಸಿದರು.

ಸಚ್ಚರಿಪೇಟೆಯಲ್ಲಿ ಪ್ರಧಾನಿ 129ನೇ ಮನ್ ಕೀ ಬಾತ್ ವೀಕ್ಷಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವು ಕೇವಲ ಭಾಷಣವಲ್ಲ, ಅದು ದೇಶದ ಕಟ್ಟಕಡೆಯ ವ್ಯಕ್ತಿಯ ಸಾಧನೆ ಗುರುತಿಸುವ ಮತ್ತು ಜನಸಾಮಾನ್ಯರಲ್ಲಿ ದೇಶ ಪ್ರೇಮವನ್ನು ಜಾಗೃತಗೊಳಿಸುವ ಪ್ರೇರಣಾಶಕ್ತಿಯಾಗಿದೆ. ಇಡೀ ದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿಯ ವಿಚಾರವಾಗಿಯೂ ಮೋದಿ ಅವರು ಮಾತನಾಡಿದ್ದಾರೆ. ಇಂತಹ ಪ್ರಧಾನಿಯನ್ನು ಪಡೆದ ನಾವು ಪುಣ್ಯವಂತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ಭಾನುವಾರ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ 129ನೇ ಆವೃತ್ತಿಯ ನೇರ ಪ್ರಸಾರ ವೀಕ್ಷಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ರಾಜಕೀಯ ರಹಿತವಾಗಿ ದೇಶದ ವಿವಿಧ ಮೂಲೆಗಳಲ್ಲಿರುವ ಅನಾಮಧೇಯ ಸಾಧಕರನ್ನು ಮೋದಿ ಅವರು ಇಡೀ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಇದು ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿ. ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ರಾಷ್ಟ್ರಚಿಂತನೆ ಬೆಳೆಯಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ ಎಂದರು.ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ದೇಶದ ಹಳ್ಳಿಹಳ್ಳಿಗಳಲ್ಲಿರುವ ಸಂಸ್ಕೃತಿ, ಕಲೆ ಮತ್ತು ದೇಶಿಯ ಉತ್ಪನ್ನಗಳಿಗೆ ‘ಮನ್ ಕೀ ಬಾತ್’ ಮೂಲಕ ಹೊಸ ಆಯಾಮ ಸಿಕ್ಕಿದೆ. ಜನರಲ್ಲಿ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಿದೆ. ಇಂದಿನ ಯುವ ಪೀಳಿಗೆಗೆ ಮೋದಿ ಅವರ ಮಾತುಗಳು ಮಾರ್ಗದರ್ಶಕವಾಗಿವೆ. ಶಾಲಾ ಹಂತದಲ್ಲಿಯೇ ಮಕ್ಕಳು ಇಂತಹ ಕಾರ್ಯಕ್ರಮಗಳನ್ನು ಆಲಿಸುವುದರಿಂದ ಅವರಲ್ಲಿ ಸಮಾಜಮುಖಿ ಚಿಂತನೆ ಬೆಳೆಯುತ್ತದೆ ಎಂದರು.ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಕಾರ್ಕಳ ಮಂಡಲಾಧ್ಯಕ್ಷ ನವೀನ್ ನಾಯಕ್, ಪಕ್ಷದ ಪ್ರಮುಖರಾದ ಕೆ.ಉದಯ ಕುಮಾರ್ ಶೆಟ್ಡಿ, ಮಹಾವೀರ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಬೋಳ ಸತೀಶ್ ಪೂಜಾರಿ, ವಿನಯ ಡಿ. ಬಂಗೇರ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಸಾಮಾಜಿಕ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.