ಹಾವೇರಿ ತಾಲೂಕಿನ ಟಾಟಾ ಮಣ್ಣೂರ ಗ್ರಾಮದ ಗ್ರಾಮದೇವತಾ ದೇವಸ್ಥಾನದಲ್ಲಿ ಜರುಗುತ್ತಿರುವ ಪರಿವರ್ತನೆಯೆಡೆಗೆ ಧರ್ಮಜಾಗೃತಿ ಪ್ರವಚನ ಕಾರ್ಯಕ್ರಮದಲ್ಲಿ ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು.

ಹಾವೇರಿ: ಗುರುವಿನ ಬಗ್ಗೆ ಅಪಾರ ಶ್ರದ್ಧಾ-ಭಕ್ತಿ ಹೊಂದಿರುವ ಗ್ರಾಮ ಮಣ್ಣೂರ. ಗ್ರಾಮಸ್ಥರ ಗುರು ಭಕ್ತಿ ವರ್ಣಿಸಲು ಅಸಾಧ್ಯ. ಭಕ್ತಿಯ ತವರೂರಾಗಿ ಮಣ್ಣೂರು ಮಾದರಿಯಾಗಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಟಾಟಾ ಮಣ್ಣೂರ ಗ್ರಾಮದ ಗ್ರಾಮದೇವತಾ ದೇವಸ್ಥಾನದಲ್ಲಿ ಜರುಗುತ್ತಿರುವ ಪರಿವರ್ತನೆಯೆಡೆಗೆ ಧರ್ಮಜಾಗೃತಿ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಮಣ್ಣೂರ ಗ್ರಾಮಕ್ಕೂ ನೆಗಳೂರ ಸಂಸ್ಥಾನ ಹಿರೇಮಠಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಮಠದ ಹಿಂದಿನ ಗುರುಗಳಾದ ಶಿವಾನಂದ ಶಿವಾಚಾರ್ಯರ ಜನ್ಮಭೂಮಿ ಈ ಗ್ರಾಮ. ಶ್ರೀಗಳ ಪೂರ್ವಾಶ್ರಮದ ತಾಯಿ ಶಾಂತಮ್ಮ (ಚಿನ್ನಮ್ಮ) ತವರೂರು, ಆ ಹಿನ್ನೆಲೆಯಲ್ಲಿ ಶಿವಾನಂದ ಶಿವಾಚಾರ್ಯರ ಬಗ್ಗೆ ಅಪಾರ ಪ್ರೀತಿ ಹಾಗೂ ಭಕ್ತಿಯನ್ನು ಹೊಂದಿರುವ ಗ್ರಾಮಸ್ಥರ ಭಕ್ತಿ ಎಂತಹದ್ದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಕಳೆದ 2 ತಿಂಗಳಿಂದ ಶ್ರೀಮಠದ ಮಹಾರಥೋತ್ಸವ ನಿಮಿತ್ತ ಜಿಲ್ಲೆ- ಹೊರ ಜಿಲ್ಲೆಗಳ ಗ್ರಾಮಗಳಲ್ಲಿ ಪರಿವರ್ತನೆಯೆಡೆಗೆ ಧರ್ಮಜಾಗೃತಿ ಕಾರ್ಯಕ್ರಮ ಸಾಗಿಕೊಂಡು 16ನೇ ಕಾರ್ಯಕ್ರಮ ಮಣ್ಣೂರ ಗ್ರಾಮದಲ್ಲಿ ಜರುಗುತ್ತಿದೆ. 15 ಗ್ರಾಮಗಳ ಕಾರ್ಯಕ್ರಮದ ದಾಖಲೆಯನ್ನು ಮೀರಿಸುವ ಕಾರ್ಯಕ್ರಮ ಗ್ರಾಮದಲ್ಲಿ ನಡೆಯುತ್ತಿದೆ. ಗ್ರಾಮಸ್ಥರು ಶ್ರೀಮಠದ ಬಗ್ಗೆ, ಗುರುಗಳ ಬಗ್ಗೆ ನಿಷ್ಕಲ್ಮಶವಾದ ಶ್ರದ್ಧಾ- ಭಕ್ತಿ ಕಂಡು ಸಂತಸವನ್ನುಂಟು ಮಾಡಿದೆ. ಗ್ರಾಮದ ಜೀವಂತ ಸಮಾಧಿಸ್ತರಾದ ಗದ್ದಿಗೇಶ್ವರ ವಿರೂಪಾಕ್ಷೇಶ್ವರ ತಪೋವನ ಹಿರೇಮಠವನ್ನು ನೆಗಳೂರ ಹಿರೇಮಠದ ಶಾಖಾ ಮಠವಾಗಿ ಅಭಿವೃದ್ಧಿ ಪಡಿಸುತ್ತಿರುವುದು ಗ್ರಾಮಸ್ಥರ ಗುರುಭಕ್ತಿಯನ್ನು ತೋರಿಸುತ್ತಿದೆ ಎಂದರು.ಪ್ರವಚನಕಾರ ಗುರುಮಹಾಂತಯ್ಯ ಶಾಸ್ತ್ರಿಗಳು ಆರಾಧ್ಯಮಠ ಮಾತನಾಡಿ, ಮನುಷ್ಯ ಜೀವನದಲ್ಲಿ ಉನ್ನತಿ ಕಾಣಲು ಗುರಿಗಳಿರಬೇಕು ಅದನ್ನು ಸಾಕಾರಗೊಳಿಸಲು ಗುರುಗಳ ಮಾರ್ಗದರ್ಶನ ಬೇಕು, ಗುರಿ ಮತ್ತು ಗುರು ಇಲ್ಲದ ಜೀವನ ವ್ಯರ್ಥ ಎಂದರು.ಶಿಕ್ಷಕ ಎಸ್.ಎಸ್. ಮಡ್ಲೂರ ಮಾತನಾಡಿ, ಮಣ್ಣೂರ ಗ್ರಾಮಕ್ಕೆ ಶ್ರೀಗಳ ಪಾದಸ್ಪರ್ಶದಿಂದ ಗ್ರಾಮದ ಚಿತ್ರಣವೇ ಬದಲಾಗಿದೆ. ಗ್ರಾಮದ ಪ್ರತಿ ಮನೆ-ಮನದಲ್ಲೂ ಭಕ್ತಿ ಭಾವ ಮೂಡಿದ್ದು, ಪ್ರತಿಯೊಬ್ಬರೂ ಒಟ್ಟಾಗಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.ಶ್ರೀಗಳಿಗೆ ಗ್ರಾಮಸ್ಥರಿಂದ ತುಲಾಭಾರ ಸೇವೆ ನೆರವೇರಿಸಲಾಯಿತು. ಭಕ್ತಾದಿಗಳಿಗೆ ಶ್ರೀಗಳು ಕೈ ಬುತ್ತಿ ಪ್ರಸಾದ ವಿತರಿಸಿದರು. ಇದಕ್ಕೂ ಪೂರ್ವದಲ್ಲಿ ಶ್ರೀಗಳಿಂದ ಗ್ರಾಮದಲ್ಲಿ ಸದ್ಭವನಾ ಪಾದಯಾತ್ರೆ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಗುರುಶಾಂತೇಶ್ವರ ಭಜನಾ ಸಂಘದ ಸದಸ್ಯರು, ಮಣ್ಣೂರು, ಕೆಸರಳ್ಳಿ, ಚನ್ನೂರ, ನೆಗಳೂರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮಣ್ಣೂರ ಗ್ರಾಮಸ್ಥರಿಂದ ರಥೋತ್ಸವಕ್ಕೆ ಕಳಸ: ಮಾ. 22ರಂದು ಜರುಗುವ ನೆಗಳೂರ ಸಂಸ್ಥಾನ ಹಿರೇಮಠದ ನೂತನ ಮಹಾರಥೋತ್ಸವದ ಕಳಸಾರೋಹಣ ನೆರವೇರಿಸುವ ಜವಾಬ್ದಾರಿ ಮಣ್ಣೂರ ಗ್ರಾಮಸ್ಥರದ್ದು ಎಂದು ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು. ಪ್ರತಿವರ್ಷ ರಥೋತ್ಸವಕ್ಕೆ ಮಣ್ಣೂರ ಗ್ರಾಮದಿಂದ ಕಳಸ ಮೆರವಣಿಗೆಯ ಮುಖಾಂತರ ನೆಗಳೂರ ಶ್ರೀಮಠಕ್ಕೆ ತಂದು ಗ್ರಾಮಸ್ಥರೇ ರಥದ ಮೇಲೆ ಕಳಸವಿಟ್ಟು ಪೂಜೆ ಸಲ್ಲಿಸಿದ ನಂತರ ರಥೋತ್ಸವ ಚಾಲನೆ ನೀಡಬೇಕೆಂದರು. ಕಳಸ ತರಲು ಹಲವಾರು ಗ್ರಾಮಗಳ ಸದ್ಭಕ್ತರು ಶ್ರೀಗಳಲ್ಲಿ ಬೇಡಿಕೆಯಿಟ್ಟಿದ್ದರು, ಕೊನೆಗೆ ಮಣ್ಣೂರ ಗ್ರಾಮಕ್ಕೆ ಕಳಸಾರೋಹಣದ ಸೇವೆ ದೊರೆತಿರುವುದು ಗ್ರಾಮಸ್ಥರೇ ಪುಣ್ಯವಂತರು ಎಂದರು.