ಮನುಷ್ಯನ ಅತಿ ಆಸೆ ಭೋಗಕ್ಕೆ ಕಾರಣ: ಸ್ವರ್ಣವಲ್ಲೀ ಶ್ರೀ

| Published : Jan 28 2024, 01:18 AM IST

ಮನುಷ್ಯನ ಅತಿ ಆಸೆ ಭೋಗಕ್ಕೆ ಕಾರಣ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಯೋಗ ಏನಕ್ಕಾಗಿ ಬೇಕು ಎಂಬ ಪ್ರಶ್ನೆಗೆ ಹಲವಾರು ಉತ್ತರಗಳಿವೆ. ಇವುಗಳಲ್ಲಿ ಒಂದು ಪ್ರಮುಖ ಸಂಗತಿಯೆಂದರೆ ಭೋಗ ನಿಯಂತ್ರಣ. ಅತಿಯಾದ ಭೋಗ ಸಂಸಾರ ಬಂಧನಕ್ಕೆ ಕಾರಣವಾಗುತ್ತದೆ.

ಶಿರಸಿ:

ಮನುಷ್ಯನ ಅತಿ ಆಸೆ ಭೋಗಕ್ಕೆ ಕಾರಣವಾಗುತ್ತದೆ. ಭೋಗ ಅತಿಯಾದಾಗ ರೋಗ ಉಂಟಾಗುತ್ತದೆ. ಇವೆಲ್ಲಕ್ಕೂ ಕಡಿವಾಣ ಯೋಗದಿಂದ ಸಾಧ್ಯ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಯೋಗ ಮಂದಿರದ ೨೭ನೇ ವಾರ್ಷಿಕೋತ್ಸವ ಸಮಾರೋಪದಲ್ಲಿ ಶನಿವಾರ ಅವರು ಮಾತನಾಡಿದರು.ಜೀವನದಲ್ಲಿ ಯೋಗ ಏನಕ್ಕಾಗಿ ಬೇಕು ಎಂಬ ಪ್ರಶ್ನೆಗೆ ಹಲವಾರು ಉತ್ತರಗಳಿವೆ. ಇವುಗಳಲ್ಲಿ ಒಂದು ಪ್ರಮುಖ ಸಂಗತಿಯೆಂದರೆ ಭೋಗ ನಿಯಂತ್ರಣ. ಅತಿಯಾದ ಭೋಗ ಸಂಸಾರ ಬಂಧನಕ್ಕೆ ಕಾರಣವಾಗುತ್ತದೆ. ನಾವು ಭೋಗಾಭಿಲಾಷೆ ಪರಿಹರಿಸಿಕೊಳ್ಳದಿದ್ದರೆ ಮೋಕ್ಷದ ದಾರಿ ತೆರೆದುಕೊಳ್ಳುವುದಿಲ್ಲ. ಭೋಗ ಅತಿಯಾಗುವುದೇ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇತ್ತೀಚೆಗೆ ಹೆಚ್ಚಿರುವ ವೈವಾಹಿಕ ಸಮಸ್ಯೆಗಳ ಒಳಹೊಕ್ಕು ನೋಡಿದರೆ ಭೋಗವೇ ಪ್ರಮುಖ ಕಾರಣವಾಗಿ ಕಾಣುತ್ತದೆ. ಭೋಗದ ತ್ಯಾಗಕ್ಕೆ ಯೋಗ ಬೇಕು. ಆಸನ, ಪ್ರಾಣಾಯಾಮ, ಭಜನೆಯಿಂದ ಭೋಗ ನಿಯಂತ್ರಿಸಬಹುದಾಗಿದೆ ಎಂದರು.

ಯೋಗ ದಿನದ ಸ್ವಲ್ಪ ಭಾಗಕ್ಕೆ ಮಾತ್ರ ಸೀಮಿತ ಆಗಬಾರದು. ಯೋಗ ಜೀವನ ಪದ್ಧತಿ ಆಗಬೇಕು. ಭಗವಂತನ ಪ್ರಾರ್ಥನೆಯಿಂದ ಭೋಗಕ್ಕೆ ಕಾರಣವಾಗುವ ಆಸೆಯನ್ನು ದೂರಗೊಳಿಸಬಹುದು ಎಂದು ಶ್ರೀಗಳು ತಿಳಿಸಿದರು.ಇದೇ ವೇಳೆ ಸಮಾಜ ಸೇವಕ ವಿ.ಪಿ. ಹೆಗಡೆ ವೈಶಾಲಿ ಅವರಿಗೆ ವಿಜಯಗುಣಶಾಲಿ ಎಂಬ ಬಿರುದು, ಜಲತಜ್ಞ ಶಿವಾನಂದ ಕಳವೆ ಅವರನ್ನು ಪರಿಸರ ಕಿಂಕರ ಬಿರುದಿನೊಂದಿಗೆ ಶ್ರೀಗಳು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಪಿ. ಹೆಗಡೆ ವೈಶಾಲಿ, ಶಿರಸಿಯಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಬೇರೆಲ್ಲೂ ನಡೆಯುವುದಿಲ್ಲ. ಹೀಗಾಗಿ, ಸ್ಮಶಾನ ಭೂಮಿಯಲ್ಲಿ ರಂಗ ಮಂದಿರ ಸ್ಥಾಪಿಸುವ ನಮ್ಮ ಕನಸು ಸಾಕಾರಗೊಂಡಿದೆ. ಈ ಸನ್ಮಾನ ಪೂಜ್ಯರಿಂದ ಶೂನ್ಯಕ್ಕೆ ಸನ್ಮಾನ ಮಾಡದಂತಾಗಿದೆ ಎಂದರು. ಶಿವಾನಂದ ಕಳವೆ ಮಾತನಾಡಿ, ಕೆರೆಗಳ ಸಂಖ್ಯೆ ರಾಜ್ಯದಲ್ಲಿ ಜಾಸ್ತಿ ಇದ್ದರೂ ನಾವು ನೀರಿಗಾಗಿ ಪರಿತಪಿಸುತ್ತಿದ್ದೇವೆ. ಇದರಲ್ಲಿ ನಮ್ಮ ಸೋಲೂ ಇದೆ. ನಾವು ನೀರು ಬಳಕೆದಾರರಾಗಿದ್ದರೂ ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತರಾಗಿಲ್ಲ. ಜಲ ಜಾಗೃತಿ ನಮ್ಮಿಂದಾಗಬೇಕು ಎಂದು ಹೇಳಿದರು.ಯೋಗ ಮಂದಿರ ಅಧ್ಯಕ್ಷ ಎಸ್‌.ಎನ್. ಭಟ್, ಸದಸ್ಯರಾದ ಶಾಂತಾರಾಮ ಹೆಗಡೆ ಬಂಡಿಮನೆ, ದಾಮೋದರ ಭಟ್, ಕಾರ್ಯದರ್ಶಿ ಸಿ.ಎಸ್‌. ಹೆಗಡೆ, ಮಾತೃ ಮಂಡಳಿ ಸಹಕಾರ್ಯದರ್ಶಿ ಭಾರತಿ ಹೆಗಡೆ ಇದ್ದರು.