ಸಾರಾಂಶ
ಮೊಹರಂ ಹಬ್ಬದಿಂದ ಮನುಷ್ಯ ಸಂಬಂಧ ಗಟ್ಟಿಯಾಗುತ್ತದೆ.
ಸಾಹಿತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಅಭಿಮತ
ಕನ್ನಡಪ್ರಭ ವಾರ್ತೆ ಕುಕನೂರುಮೊಹರಂ ಹಬ್ಬದಿಂದ ಮನುಷ್ಯ ಸಂಬಂಧ ಗಟ್ಟಿಯಾಗುತ್ತದೆ ಎಂದು ಸಾಹಿತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಹೇಳಿದರು.
ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಜರುಗಿದ ಮೊಹರಂ ಸಾಂಸ್ಕೃತಿಕ ಸಂಭ್ರಮದ ಕತ್ತಲ್ ರಾತ್ರಿಯಂದು ಏರ್ಪಡಿಸಿದ್ದ ಗೀಗೀಪದಗಳ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಅದರಲ್ಲೂ ಕರ್ನಾಟಕದಲ್ಲಿ ಮೊಹರಂ ಆಚರಣೆಯು ಧರ್ಮ, ರಾಜಕೀಯ ಎಲೆಗಳನ್ನು ಮೀರಿ ಬೆಳೆದು ನಿಂತು ಒಂದು ಜನತೆಯ ಧರ್ಮವಾಗಿ ಮಾರ್ಪಟ್ಟಿದೆ. ಮನುಷ್ಯ ಸಂಬಂಧಗಳ ಬೆಸುಗೆಯಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯ ಭಾವೈಕ್ಯತೆಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಮೊಹರಂ ಪ್ರಮುಖ ಪಾತ್ರ ವಹಿಸಿದೆ ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಮೊಹರಂ ಎಂಬುದು ಮನಸ್ಸಿಗೆ ನೆಮ್ಮದಿ, ನಲಿವು, ಭಾವೈಕ್ಯತೆ, ಪ್ರೀತಿ ನೀಡುವ ಹಬ್ಬ. ಗ್ರಾಮದ ಜನರಲ್ಲಿ ಮೊಹರಂ ಹಬ್ಬ ಒಗ್ಗಟ್ಟು ತರುತ್ತದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ್ ಮಾತನಾಡಿ, ಬಿನ್ನಾಳ ಗ್ರಾಮ ಒಕ್ಕಲುತನ ಹಾಗೂ ಭಾವೈಕ್ಯತೆ ಸಂಬಂಧದಿಂದ ಸಾಗುತ್ತಿದೆ. ಇಲ್ಲಿ ಬಿನ್ನಾಳ ಬಸವೇಶ್ವರನ ಕೃಪಾಶೀರ್ವಾದದ ಜೊತೆಗೆ ಗ್ರಾಮಸ್ಥರ ಕಾಯಕ ನಿಷ್ಠೆ ಗ್ರಾಮದ ಹಿರಿಮೆ ಹೆಚ್ಚಿಸುತ್ತಿದೆ. ಮೊಹರಂ ಹಬ್ಬವನ್ನು ಇಡೀ ಗ್ರಾಮಸ್ಥರು ಮಾದರಿ ರೀತಿಯಲ್ಲಿ ಆಚರಣೆ ಮಾಡುತ್ತಾ ಬಂದಿರುವುದು ಗ್ರಾಮಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ ಎಂದರು.ಬೆಳಗಾವಿ ಜಿಲ್ಲೆಯ ಅಥಣಿಯ ಲಕ್ಷ್ಮೀಬಾಯಿ ಹಾಗೂ ಪರಶುರಾಮ್ ಬಡಿಗೇರ ಸಂಗಡಿಗರು ಗೀಗೀ ಪದಗಳ ಗಾಯನ ಹಾಗೂ ಕುಕನೂರು ತಾಲೂಕಿನ ಇಟಗಿಯ ಶ ಬಾಬುಸಾಬ್ ಮತ್ತು ಸಂಗಡಿಗರು ರಿವಾಯಿತಿ ಪದಗಳ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.
ಪ್ರಮುಖರಾದ ಚನ್ನಯ್ಯ ಹೀರೇಮಠ, ಮಲ್ಲಯ್ಯ ಪೂಜಾರ, ಸಿದ್ದಲಿಂಗಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ಸಂಗಪ್ಪ ತಹಶೀಲ್ದಾರ್. ಚೆನ್ನವ್ವ ವೀರಪ್ಪ ಮುತ್ತಾಳ, ಕಮಲಾಕ್ಷಿ ಪತ್ರೆಪ್ಪ ಕಂಬಳಿ, ಮಹ್ಮದಸಾಬ ಕರಿಮಸಾಬ ವಾಲಿಕಾರ, ಶಂಕರಪ್ಪ ಕಂಬಳಿ, ಶರಣಪ್ಪ ಹಾದಿಮನಿ, ಜಗದೀಶ್ ಚಟ್ಟಿ, ಖಾಸಿಂಸಾಬ ವಾಲಿಕಾರ, ಫಕೀರಸಾಬ ಮ್ಯಾಗಳಮನಿ, ಮಾಬುಸಾಬ ಕಡೆಮನಿ, ರಾಜಾಸಾಬ್ ಮ್ಯಾಗಳಮನಿ ಇತರರು ಇದ್ದರು.