ತಾಂತ್ರಿಕ ಯುಗದಲ್ಲಿ ಶರಣರ ವಚನ ಸಮಾಜಕ್ಕೆ ಮಹಾಮಂತ್ರ: ಡಾ.ವಿಜಯಶ್ರೀ ಬಶೆಟ್ಟಿ

| Published : Feb 06 2025, 12:20 AM IST

ಸಾರಾಂಶ

ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಡಾ. ಎಸ್.ಎಸ್. ಸಿದ್ಧಾರೆಡ್ಡಿ ಫೌಂಡೇಶನ್ ಬೀದರ್ ಹಾಗೂ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕದ ಸಹಯೋಗದಲ್ಲಿ “ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಡಾ. ವಿಜಯಶ್ರೀ ಬಶೆಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್ಬಸವಾದಿ ಶರಣರು ಅಂದು ವೈಚಾರಿಕ ನೆಲಗೆಟ್ಟಿನ ಮೇಲೆ ಸಾಮಾಜಿಕ, ಆಧ್ಮಾತ್ಮಿಕ, ಸಾಂಸ್ಕೃತಿಕ ಜೀವನ ಮೌಲ್ಯಗಳ ಜನಪರ, ಜೀವಪರ ಕಾಳಜಿಯಿಂದ ಮಾಡಿದ ಕ್ರಾಂತಿಯು ಪ್ರಸ್ತುತ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಬೀದರಿನ ಖ್ಯಾತ ವೈದ್ಯರಾದ ಡಾ. ವಿಜಯಶ್ರೀ ಬಶೆಟ್ಟಿ ನುಡಿದರು.ನಗರದ ಪೂಜ್ಯ ಚನ್ನಬಸವ ಪಟ್ಟದೇವರ ಜಿಲ್ಲಾ ರಂಗ ಮಂದಿರದಲ್ಲಿ ಡಾ. ಎಸ್.ಎಸ್. ಸಿದ್ಧಾರೆಡ್ಡಿ ಫೌಂಡೇಶನ್ ಬೀದರ ಹಾಗೂ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕದ ಸಹಯೋಗದಲ್ಲಿ ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ಶರಣರ ವಚನಗಳು ಯುವಜನಾಂಗದವರ ಬದುಕು ರೂಪಿಸಿಕೊಳ್ಳುವುದಾಗಿದೆ, ತಾಂತ್ರಿಕ ಯುಗದಲ್ಲಿ ಸಮಾಜಕ್ಕೆ ಶರಣರ ವಚನಗಳು ಮಹಾಮಂತ್ರಗಳಾಗಿವೆ. ಆ ನಿಟ್ಟಿನಲ್ಲಿ ವಚನ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವುದರಿಂದ ಪ್ರತಿಭಾವಂತರಲ್ಲಿ ಅಡಗಿರುವ ಪ್ರತಿಭೆಯನ್ನು ಅರಳಿಸುವುದರ ಜೊತೆಗೆ ವ್ಯಕ್ತಿಯಲ್ಲಿ ಮಾನಸಿಕ, ದೈಹಿಕ ಭಾವನಾತ್ಮಕ ಶಕ್ತಿಯು ಬೆಳೆಯುವಂತೆ ಮಾಡುತ್ತದೆ. ವಚನಗಳಲ್ಲಿ ಬದುಕಿನ ಆದರ್ಶ ಸೂತ್ರಗಳು ಅಡಗಿವೆ ಎಂದರು.ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷೆ ಪುಣ್ಯವತಿ ವಿಸಾಜಿ ಪ್ರಾಸ್ತಾವಿಕ ಮಾತನಾಡಿ, ಫೌಂಡೇಶನವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಮಾಜಮುಖಿ ಸೇವೆ ಮಾಡುತ್ತಲಿದೆ. ಫೌಂಡೇಶನದ ಅಧ್ಯಕ್ಷರಾದ ಡಾ. ಗುರಮ್ಮಾ ಸಿದ್ಧಾರೆಡ್ಡಿ ಅವರು ದಾಸೋಹಿಗಳಾಗಿದ್ದು, ಸದಾ ಸಮಾಜಮುಖಿ ಕಾರ್ಯಕ್ರಮದಲ್ಲಿ ಕ್ರಿಯಾಶೀಲರಾಗಿ ಬಸವ ತತ್ವವನ್ನು ಆಚರಣೆಯಲ್ಲಿ ತರುತ್ತಿದ್ದಾರೆ ಎಂದರು.ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುನೀತಾ ದಾಡಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್ತಿನಿಂದ ಪ್ರತಿ ತಿಂಗಳಿಗೆ ಸರ್ವ ಶರಣರ ಜೀವನ ಕುರಿತು ಚಿಂತನಗೋಷ್ಠಿ ನಡೆಸುವುದರ ಜೊತೆಗೆ ಮನೆ ಮನೆಗೆ ಬಸವ ತತ್ವದ ಮೌಲ್ಯವನ್ನು ಬೀರುವುದರೊಂದಿಗೆ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಆಚಾರವಂತಿಕೆ ಯ ಅರಿವು ಮೂಡಿಸುವಂತಹ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಶರಣರ ತತ್ವದಲ್ಲಿ ಗುಡಿ ಸಂಸ್ಕೃತಿಯಲ್ಲಿ ದೇವರನ್ನು ಕಾಣರಾರದ ಇಷ್ಠಲಿಂಗ ಪೂಜೆಯಲ್ಲಿ ಆರಾಧಕರಾಗಿ, ಸತ್ಯಶುದ್ಧ ಕಾಯಕ ಮಾಡುವಲ್ಲಿ ದೇವರನ್ನು ಕಾಣಬಹುದು, ಅಂತರಂಗದಲ್ಲಿ ದೇವರಿದ್ದಾನೆ ವಿನಹ: ಬಾಹ್ಮದಲ್ಲಿ ದೇವರಿಲ್ಲ ಎಂದರು.

ಡಾ.ರಾಜಶ್ರೀ ಸಿದ್ಧಾರೆಡ್ಡಿ ನೇತೃತ್ವ ವಹಿಸಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಶ್ರೀದೇವಿ ಕಟ್ಟಿಮನಿ, ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ ಉಪಸ್ಥಿತರಿದ್ದರು.

ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕರ್ಯಕ್ರಮ ಜರುಗಿದವು. ವಚನ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಉಮಾಕಾಂತ ಮೀಸೆ ಕಾರ್ಯಕ್ರಮ ಸಂಘಟಿಸಿದರು. ಪ್ರಮುಖರಾದ ಪ್ರೊ. ಲೀಲಾವತಿ ಚಾಕೋತೆ, ರಾಮಕೃಷ್ಣ ಸಾಳೆ, ಶ್ರೀದೇವಿ ಪಾಟೀಲ, ಶೈಲಜಾ ಚಳಕಾಪೂರೆ, ರೋಹಿತ ಜಿರೋಬೆ ಮುಂತಾದವರು ಭಾಗವಹಿಸಿದ್ದರು.

ಡಾ.ರಘುಶಂಖ ಭಾತಂಬ್ರಾ ಸ್ವಾಗತಿಸಿದರೆ ಶ್ರೀನಿವಾಸ ಬಿರಾದಾರ, ಬಸವರಾಜ ಮೂಲಗೆ ನಿರೂಪಿಸಿದರು. ಕಲ್ಯಾಣರಾವ ಚಳಕಾಪೂರೆ ವಂದಿಸಿದರು.